BIG NEWS: ನಾನು ರಾಜೀನಾಮೆ ನೀಡಲು ಸಿದ್ದ: ಸಿಎಂ ಬಿಎಸ್‌ವೈ

ಬೆಂಗಳೂರು, ಜೂ.6-  ದೆಹಲಿ ವರಿಷ್ಟರು ಬಯಸುವವರೆಗೂ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಬೇಡ ಎಂದರೆ  ರಾಜೀನಾಮೆ ನೀಡಲು ಸಿದ್ದ ಎಂದು ಸಿ.ಎಂ.ಯಡಿಯೂರಪ್ಪ ಅವರು ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದರು.   ಒಂದು ಕಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೆಲವು ಶಾಸಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಯಡಿಯೂರಪ್ಪನವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ಷ ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಡಿ. ದೇವರಾಜ ಅರಸುರವರ 39ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಎಲ್ಲಿಯವರೆಗೂ ಹೈಕಮಾಂಡ್ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲು ಇಚ್ಛೆಸುತ್ತಾರೋ ಅಲ್ಲಿಯವರೆಗೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.

ಒಂದು ವೇಳೆ ಅವರು ( ದೆಹಲಿ ನಾಯಕರು) ನೀವು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸೂಚಿಸಿದರೆ, ನಾನು ಮಾರುಮಾತನಾಡದೆ ನನ್ನ ಸ್ಥಾನಕ್ಕೆ ಸಂತೋಷದಿಂದಲೇ ರಾಜೀನಾಮೆ ನೀಡುತ್ತೇನೆ ಎಂದರು. ನನಗೆ ವರಿಷ್ಟರು ಒಂದು ಅವಕಾಶ ಕೊಟ್ಟಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ನನ್ನ ಬಗ್ಗೆ ಯಾರೇ ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ಅದರ ಬಗ್ಗೆ ಗಮನ ಕೊಡುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ಮಾತಿನಲ್ಲೇ ಟಾಂಗ್ ಕೊಟ್ಟರು. ಈ ಯಡಿಯೂರಪ್ಪನವರ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ಎಷ್ಟು ದಿನ ವಿಶ್ವಾಸ ಇಟ್ಟು ಮುಂದುವರೆಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ.ಯಾವಾಗ ರಾಜೀನಾಮೆ ಕೊಡಿ ಅಂತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ತಿಳಿಸಿದರು.

ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು. ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ.  ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಸ್ಪಷ್ಟಪಡಿಸಿದರು.

ಪರ್ಯಾಯ ನಾಯಕ ಇಲ್ಲವೆಂಬ ವಿಚಾರವಾಗಿ , ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನ ನಾನು ಒಪ್ಪುವುದಿಲ್ಲ.ದೇಶದಲ್ಲಿ ಮತ್ತು ರಾಜ್ಯದಲ್ಲಿ ಪರ್ಯಾಯ ನಾಯಕರು ಇದ್ದೇ ಇರುತ್ತಾರೆ. ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲೂ ಪರ್ಯಾಯ ನಾಯಕರು ಇಲ್ಲ ಅಂತಾ ಏನಿಲ್ಲ.ಇದನ್ನ ನಾನು ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಯಡಿಯೂರಪ್ಪ ‌ತಿರುಗೇಟು ನೀಡಿದರು.

ಕಳೆದ ವಾರವಷ್ಟೇ ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಬದಲಾಯಿಸಿ ಪರ್ಯಾಯ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಬಿಜೆಪಿಯ ಕೆಲವು ಶಾಸಕರು ದೆಹಲಿಯಲ್ಲಿ ಲಾಭಿ ನಡೆಸಿದ್ದರು. ಸಚಿವ ಸಿ.ಪಿ.ಯೋಗೀಶ್ವರ್ , ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಸೇರಿದಂತೆ ಮತ್ತಿತರರು ದೆಹಲಿ ವರಿಷ್ಟರನ್ನು ಭೇಟಿಯಾಗಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು.

ಸಿ.ಎಂ ಪುತ್ರ ಪ್ರತಿಯೊಂದು ಇಲಾಖೆಯಲ್ಲೂ ಹಸ್ತಕ್ಷೇಪ, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲ, ಸರಕಾರದ ವರ್ಚಸ್ಸಿಗೆ ಧಕ್ಕೆಯಾಗಿದ್ದು ನಾಯಕತ್ವ ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲೇ ‌ಬಿ.ವೈ.ವಿಜೇಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಿದು ಕುತುಹಲಕ್ಕೆ ಕಾರಣವಾಗಿತ್ತು.

ನಿನ್ನೆಯಷ್ಟೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ಸಂತೋಷ್, ಪ್ರಧಾನ‌ ಕಾರ್ಯದರ್ಶಿ ಸಿ.ಟಿ.ರವಿ ಅವರುಗಳು ಪ್ರತ್ಯೇಕವಾಗಿ ನಡ್ಡಾ ಮಾಡಿ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದರು.

ಈ ಎಲ್ಲಾ ಬೆಳವಣಿಗೆ ನಡೆಯುತ್ತಿರುವಾಗಲೇ ಇಂದು ಯಡಿಯೂರಪ್ಪ ಅವರು ನೀಡಿರುವ‌ ಹೇಳಿಕೆ ನಾನಾ ಗೂಡರ್ಥಗಳನ್ನು ಹುಟ್ಟು ಹಾಕಿದೆ.