ಕಾಲ ಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು,ಜು.23- ಮಳೆಗಾಲ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಟೆಂಡರ್‍ಶ್ಯೂರ್, ನಗರೋತ್ಥಾನ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಯಡಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಗಿಸಬೇಕೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯದಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ಇಂದು ತಮ್ಮ ಸಂಪುಟದ ಸಹೋದ್ಯೋಗಿಗಳು, ಬಿಬಿಎಂಪಿ, ಬಿಡಿಎ,ಬಿಡಬ್ಲ್ಯುಎಸ್‍ಎಸ್‍ಬಿ ಮತ್ತಿತರ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ನಡೆಸಿದ ಅವರು, ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ 36 ರಸ್ತೆಗಳ ಪೈಕಿ 9 ರಸ್ತೆಗಳ ಕಾಮಗಾರಿಗಳನ್ನು ಇಂದು ಮುಖ್ಯಮಂತ್ರಿ ವೀಕ್ಷಣೆ ಮಾಡಿದರು.

ಪ್ಲಾನಿಟೋರಿಯಂ ರಸ್ತೆ, ಇನ್ಪಾಂಟ್ರಿರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಡಿಕನ್ಷನ್ ರಸ್ತೆ, ಅಲ್ಸೂರು ರಸ್ತೆ, ಬ್ರಿಗೇಡ್ ರೋಡ್, ರಾಜರಾಮ್ ಮೋಹನ್‍ರಾಯ್ ರಸ್ತೆ, ಕಸ್ತೂರಿಬಾ ರಸ್ತೆ, ರಾಜಭವನ್ ರಸ್ತೆ, ಅರಮನೆ ರಸ್ತೆ ವೀಕ್ಷಿಸಿದರು. ಟೆಂಡರ್‍ಶ್ಯೂರ್ ರಸ್ತೆಗಳಾದ ಗಾಂಧಿನಗರ, ಸುಬೇದಾರ್ ಛತ್ರಂ ರಸ್ತೆ, ಧನ್ವಂತರಿ ರಸ್ತೆ, ಕಾಟನ್‍ಪೇಟೆ ಮುಖ್ಯರಸ್ತೆ, ಡಬ್ಲ್ಯುಹೆಚ್ ಹನುಮಂತಪ್ಪ ರಸ್ತೆ, ವಾಣಿವಿಲಾಸ್ ರಸ್ತೆ, ಪಾದಚಾರಿ ಮಾರ್ಗ, ಏಕರೂಪದ ಕಾಮಗಾರಿಗಳನ್ನು ವೀಕ್ಷಿಸಿ ತಕ್ಷಣ ಕಾಮಗಾರಿಗಳನ್ನು ಮುಗಿಸಬೇಕೆಂದು ಸೂಚನೆ ಕೊಟ್ಟರು. ಸುಗಮ ವಾಹನ ಸಂಚಾರಕ್ಕಾಗಿ ಮತ್ತು ರಸ್ತೆಗುಂಡಿಗಳಿಂದ ಆಗುತ್ತಿದ್ದ ಅನಾಹುತಗಳನ್ನು ತಪ್ಪಿಸಲು ಕೈಗೆತ್ತಿಕೊಳ್ಳಲಾಗಿರುವ 10 ವೈಟ್‍ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿದರು.

ಹೊರವರ್ತುಲ ರಸ್ತೆ(ನಾಯಂಡಹಳ್ಳಿಯಿಂದ ಡಾ.ರಾಜ್‍ಕುಮಾರ ಸ್ಮಾರಕದವರೆಗೆ), ಬಾಣಸವಾಡಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಜಯಮಹಲ್, 1ನೇ ಮುಖ್ಯರಸ್ತೆ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲಿನ ರಸ್ತೆಗಳು, ಈಸ್ಟರ್ನ್ ರಸ್ತೆ, 5ನೇ ಕ್ರಾಸ್ ಕೋರಮಂಗಲ, 1ನೇ ಅಡ್ಡರಸ್ತೆ ಕೋರಮಂಗಲ, ಬಜಾರ್ ರಸ್ತೆ ಯಶವಂತಪುರ, ಸಿ.ವಿ.ರಾಮನ್ ಆಸ್ಪತ್ರೆ ರಸ್ತೆ ಇಂದಿರಾ ನಗರ ಮತ್ತಿತರ ಕಡೆ ವೀಕ್ಷಣೆ ಮಾಡಿದರು.

ಕೆ-100 ನಾಗರಿಕರ ಜಲವರ್ಗ ಯೋಜನೆಯಡಿ ಕೈಗೊಂಡಿರುವ ನೀರುಗಾಲುವೆಯನ್ನು ಸಹ ವೀಕ್ಷಿಸಿದರು. ಮೊದಲು ಆನಂದರಾವ್ ವೃತ್ತದಲ್ಲಿ ಬಿಡಿಎ ವತಿಯಿಂದ ನಿರ್ಮಾಣ ಮಾಡುತ್ತಿರುವ ಸ್ಟೀಲ್ ಬ್ರಿಡ್ಜ್ ಕಾಮಗಾರಿಯನ್ನು ವೀಕ್ಷಿಸಿದರು. ಈ ಯೋಜನೆಯು ಈಗಾಗಲೇ ಮುಗಿದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಬೇಕಿತ್ತು. ಆದರೂ ವಿಳಂಬವಾಗಿರುವುದಕ್ಕೆ ಅಸಮಾಧಾನ ಹೊರಹಾಕಿದರು.

ಸ್ಟೀಲ್‍ಬ್ರಿಡ್ಜ್ ನಿರ್ಮಾಣವಾಗುತ್ತಿರುವುದರಿಂದ ಉಂಟಾಗಿರುವ ಸಂಚಾರಿ ದಟ್ಟಣೆ ನಿಯಂತ್ರಿಸಬೇಕು, ಕಾಮಗಾರಿ ಇನ್ನು ವಿಳಂಬವಾಗದಂತೆ ಶೀಘ್ರದಲ್ಲೇ ಮುಗಿಸಬೇಕು ಎಂದು ತಾಕೀತು ಮಾಡಿದರು. ನಂತರ ಗಾಂಧಿನಗರ, ಧನ್ವಂತರಿ ರಸ್ತೆ, ಶೇಷಾದ್ರಿರಸ್ತೆ, ನೃಪತುಂಗ, ನಾಯಂಡನಹಳ್ಳಿ, ಮೈಸೂರು ರಸ್ತೆ, ಗೊರಗುಂಟೆಪಾಳ್ಯ, ತುಮಕೂರು ರಸ್ತೆ, ಸಿ.ವಿ.ರಾಮನ್‍ನಗರ, ಮೇಕ್ರಿವೃತ್ತ, ಹೈಗ್ರೌಂಡ್ಸ್, ಕಮರ್ಷಿಲ್ ಸ್ಟ್ರೀಟ್, ಇಂದಿರಾನಗರ, ಬ್ರಿಗೇಡ್ ರಸ್ತೆ, ರಿಚ್‍ಮಂಡ್ ವೃತ್ತ, ಶಾಂತಿನಗರ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ನಂತರ ಕಸ್ತೂರಿ ಬಾ ರಸ್ತೆ, ಮಾಣಿಕ್ ಷಾ ಪರೇಡ್ ರಸ್ತೆ, ಪೊಲೀಸ್ ಆಯುಕ್ತರ ಕಛೇರಿ ರಸ್ತೆ, ರಾಜಭವನದ ಮೂಲಕ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದರು. ಬಹುತೇಕ ಕಡೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದನ್ನು ಕಂಡು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ತಿಂಗಳುಗಟ್ಟಲೇ ಕೆಲಸ ನಡೆದರೆ ನಗರದಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಗದಿತ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿದ್ದರೂ ನೀವು ಯಾವ ಕಾರಣಕ್ಕೆ ವಿಳಂಬ ಮಾಡುತ್ತಿದ್ದೀರಿ, ಮುಂದೆ ಇದೇ ರೀತಿ ಪ್ರಮಾದವಾದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

# ಸಂಚಾರ ಅಸ್ತವ್ಯಸ್ತ:
ಮುಖ್ಯಮಂತ್ರಿಗಳು ತಮ್ಮ ಸಚಿವರು ಹಾಗೂ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ಹೊರಟ ಪರಿಣಾಮ ಅನೇಕ ಕಡೆ ಸಂಚಾರ ದಟ್ಟಣೆಯಾಗಿ ಸಾರ್ವಜನಿಕರು ಕಿಡಿಕಾರಿದರು.ಮೇಕ್ರಿವೃತ್ತ, ಆನಂದರಾವ್ ವೃತ್ತ, ಗೊರಗುಂಟೆಪಾಳ್ಯ ಸೇರಿದಂತೆ ಅನೇಕ ಕಡೆ ಗಂಟೆಗಟ್ಟಲೇ ವಾಹನಸವಾರರು ರಸ್ತೆಯಲ್ಲಿ ಪರದಾಡಿದರು.

ಮುಖ್ಯಮಂತ್ರಿಗಳೊಂದಿಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಕಂದಾಯ ಸಚಿವ ಆರ್ .ಅಶೋಕ, ಸಚಿವರಾದ ಅರವಿಂದ ಲಿಂಬಾವಳಿ, ಕೆ.ಗೋಪಾಲಯ್ಯ, ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವಗುಪ್ತ ಮುಂತಾದವರು ಪಾಲ್ಗೊಂಡಿದ್ದರು.