ಸಿಎಂ ರಾಜೀನಾಮೆ ಸಂದೇಶದ ನಂತರ ಬಿಜೆಪಿ ಹೈಕಮಾಂಡ್‍ಗೂ ಪೀಕಲಾಟ..!

ಬೆಂಗಳೂರು,ಜು.23- ಕೊರೊನಾ 3ನೇ ಅಲೆಯ ಭೀತಿ, ಹಿಂದಿನ ಕಹಿ ಅನುಭವ ಹಾಗೂ ಬೆಂಬಲಿಗ ಶಾಸಕರ ಶಕ್ತಿ ಪ್ರದರ್ಶನದಂತಹ ಚಟುವಟಿಕೆ ಮೂಲಕ ಹೈಕಮಾಂಡ್‍ಗೆ ಬಿಸಿತುಪ್ಪವಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಕಾಲಾವಕಾಶ ನೀಡದೇ ತರಾತುರಿಯಲ್ಲಿ ಯಡಿಯೂರಪ್ಪ ರಾಜೀನಾಮೆ ಸಂದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜುಲೈ 26ಕ್ಕೆ ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿದ್ದು, ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಮುಂದಿನ ಚುನಾವಣೆಯನ್ನು ಎದುರಿಸಲು ಸಮರ್ಥ ನಾಯಕತ್ವದ ಹುಡುಕಾಟದಲ್ಲಿದ್ದ ಹೈಕಮಾಂಡ್ ಈಗ ಬಿಎಸ್‍ವೈ ಉತ್ತರಾಧಿಕಾರಿ ಆಯ್ಕೆಗೆ ನಿರ್ಧರಿಸಿದೆ.

ಈಗಿನಿಂದಲೇ ಹೊಸ ನಾಯಕನಿಗೆ ಅವಕಾಶ ನೀಡಿದರೆ ಚುನಾವಣೆ ವೇಳೆಗೆ ಪರ್ಯಾಯ ನಾಯಕತ್ವ ಪಕ್ವವಾಗಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರ.ಅದಕ್ಕಾಗಿಯೇ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ಕೈಹಾಕಿದೆ. ದೆಹಲಿಗೆ ಕರೆಸಿಕೊಂಡಿದ್ದ ಕೇಂದ್ರದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. ತಕ್ಷಣವೇ ಹುದ್ದೆಯಿಂದ ನಿರ್ಗಮಿಸಬೇಕು ಎಂಬ ಸಂದೇಶ ನೀಡಿದ್ದಾರೆ.

ಆದರೆ ಇದಕ್ಕೆ ಆಷಾಢದ ಕಾರಣ ನೀಡಿದ ಯಡಿಯೂರಪ್ಪ ಸಮಯಾವಕಾಶ ಕೋರಿದ್ದರು. ಆದಾಗ್ಯೂ ವರಿಷ್ಠರು ತಿಂಗಳಾಂತ್ಯದ ಗಡುವಷಟೇ ನೀಡಿ ಕಳಿಸಿದ್ದಾರೆ ಎಂದು ಹೇಳಲಾಗಿದೆ.ಯಡಿಯೂರಪ್ಪ ಅವರಿಗೆ ಸಮಯಾವಕಾಶ ನೀಡದಿರಲು ಪ್ರಮುಖ ಕಾರಣ ಕೊರೊನಾ ಮೂರನೇ ಅಲೆ. ದೇಶದಲ್ಲಿ ಮೂರನೇ ಅಲೆ ಎದುರಾಗುವ ವರದಿ ಇದೆ. ಹಾಗಾಗಿ ಸಿಎಂ ಬದಲಾವಣೆ ಕನಿಷ್ಠ ಆರು ತಿಂಗಳ ಕಾಲ ಮುಂದೂಡಿಕೆಯಾಗಲಿದೆ. ಆಗ ಮತ್ತೆ ಬಜೆಟ್, ಮೂರನೇ ವರ್ಷ ಎಂಬ ಕಾರಣಗಳು ಎದುರಾಗಲಿವೆ.

ಅಲ್ಲದೆ ಇದಕ್ಕೆಲ್ಲಾ ಅವಕಾಶ ನೀಡಿದರೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರವಿರುತ್ತದೆ. ಚುನಾವಣಾ ವರ್ಷದಲ್ಲಿ ಆರು ತಿಂಗಳು ಮಾತ್ರ ಆಡಳಿತಕ್ಕೆ ಅವಕಾಶ ಸಿಗಲಿದೆ. ಅಷ್ಟರಲ್ಲಿ ಹೊಸ ಮುಖ್ಯಮಂತ್ರಿ ತಮ್ಮ ಸಾಮಥ್ರ್ಯ ಸಾಬೀತುಪಡಿಸಲು, ಜನರ ಮನಗೆಲ್ಲಲು, ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಹೋಗಲು ಸಾಧ್ಯವಾಗುವುದಿಲ್ಲ.
ಚುನಾವಣೆ ದೃಷ್ಟಿಯಲ್ಲಿ ಇದು ನಮ್ಮ ಯೋಜನೆಗೆ ಹಿನ್ನೆಡೆಯಾಗುತ್ತದೆ ಎಂಬ ಆತಂಕ ವರಿಷ್ಠರನ್ನು ಕಾಡಿದೆ. ಹಾಗಾಗಿ ಯಡಿಯೂರಪ್ಪ ಅವರಿಗೆ ಬೇರೆ ಯಾವುದೇ ಯೋಚನೆ ಮಾಡಲು ಅವಕಾಶ ನೀಡದೇ ರಾಜೀನಾಮೆಗೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನವೇ ಎರಡು ವರ್ಷ ಆಡಳಿತ ನಡೆಸಿ ನಿರ್ಗಮಿಸಬೇಕು ಎಂದು ಮಾತುಕತೆ ಆಗಿತ್ತು. ಇಡೀ ದೇಶದಲ್ಲಿ 75 ವರ್ಷದ ಮಿತಿ ಹಾಕಿಕೊಂಡಿರುವ ಬಿಜೆಪಿ ಬಿಎಸ್‍ವೈ ಗಡಿಯ ವಿಚಾರದಲ್ಲಿ ಮಾತ್ರ ವಿನಾಯಿತಿ ನೀಡಿದ್ದು, ಎರಡು ವರ್ಷ ಅಧಿಕಾರ ನಡೆಸಲು ಸಮ್ಮತಿಸಿತ್ತು. ಅದರಂತೆ ಈಗ ಎರಡು ವರ್ಷ ಪೂರ್ಣಗೊಂಡಿದ್ದು, ರಾಜೀನಾಮೆಗೆ ಸೂಚನೆ ನೀಡಲಾಗಿದೆ. ವಿಳಂಬವಾದಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಬಾರದೆಂದು ಕಾಲಾವಕಾಶ ನೀಡದೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ 2011ರಲ್ಲಿ ಭ್ರಷ್ಟಾಚಾರದ ಆರೋಪ ಬಂದಾಗ ರಾಜೀನಾಮೆ ನೀಡಲು ಸಿಎಂ ನಿರಾಕರಿಸಿದ್ದರು. ಹೈಕಮಾಂಡ್ ವಿರುದ್ಧವೇ ತೊಡೆತಟ್ಟಿದ್ದರು. ನಂತರ ಲಾಲ್ ಕೃಷ್ಣ ಅಡ್ವಾಣಿ ಅವರ ಸೂಚನೆ ಧಿಕ್ಕರಿಸಲು ಸಾಧ್ಯವಾಗದೆ ರಾಜೀನಾಮೆ ನೀಡಿದ್ದರು. ಆದರೆ ತಾವು ಸೂಚಿಸುವ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಷರತ್ತು ವಿಧಿಸಿದ್ದರು. ನಂತರ ಬೇರೆ ಪಕ್ಷ ಕಟ್ಟಿ ಬಿಜೆಪಿ ರಾಜಕೀಯ ಹಿನ್ನೆಡೆ ಅನುಭವಿಸುವಂತೆ ಮಾಡಿದ್ದರು. ಈ ಹಿಂದೆ ಬಂದಿದ್ದಂತಹ ಗುರುತರ ಭ್ರಷ್ಟಾಚಾರದ ಆರೋಪ ಬಂದಿಲ್ಲ, ಕೇವಲ ವಯಸ್ಸಿನ ಆಧಾರದಲ್ಲಿ ರಾಜೀನಾಮೆ ಪಡೆಯಲಾಗುತ್ತಿದೆ.

ಅಂದು ಆರೋಪವಿದ್ದಾಗಲೇ ರಾಜಕೀಯ ದಾಳ ಉರುಳಿಸಿದ್ದ ಯಡಿಯೂರಪ್ಪ ಈಗ ಸುಮ್ಮನಿರಲು ಸಾಧ್ಯವಿಲ್ಲ. ಬೆಂಬಲಿಗ ಶಾಸಕರ ಶಕ್ತಿ ಪ್ರದರ್ಶನ ಮಾಡಿ ರಾಜೀನಾಮೆ ನೀಡುವುದನ್ನು ವಿಳಂಬವಾಗುವಂತೆ ಮಾಡಬಹುದು. ಇದರಿಂದ ಭವಿಷ್ಯದ ನಾಯಕತ್ವ ರೂಪಿಸಲು ಕಷ್ಟವಾಗಲಿದೆ ಎಂದು ತರಾತುರಿಯಲ್ಲಿ ಹೈಕಮಾಂಡ್ ಸಿಎಂಗೆ ರಾಜೀನಾಮೆ ನೀಡಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ರಾಜ್ಯ ಬಿಜೆಪಿಯನ್ನು ಇತರ ರಾಜ್ಯಗಳ ರೀತಿ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಹೈಕಮಾಂಡ್, ಭವಿಷ್ಯದ ನಾಯಕನ ಸೃಷ್ಟಿ ಮತ್ತು ಮುಂಬರಲಿರುವ ಸಾರ್ವತ್ರಿಕ ಚುನಾವಣೆಗೆ ನಾಯಕತ್ವ ಕೊರತೆ ಎದುರಾಗದಿರಲಿ ಎಂದು ತರಾತುರಿಯಲ್ಲಿ ಹೈಕಮಾಂಡ್ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.