ಬೆಂಗಳೂರು,ಏ.29– ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಆಡಳಿತಾಧಿಕಾರಿ ಹುದ್ದೆಗಳಿಗೆ ಸಂಪೂರ್ಣವಾಗಿ ಹಂತಹಂತದಲ್ಲಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಕಂದಾಯ ಇಲಾಖೆ ಯಿಂದ ನೂತನವಾಗಿ ಆಯ್ಕೆ ಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ, 4 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್ ಹಾಗೂ ಡಿಜಿಟಲ್ ದೃಢೀಕೃತ ಕಂದಾಯ ದಾಖಲೆಗಳ ವಿತರಣೆ ಮಾಡಿ ಮಾತನಾಡಿದ ಅವರು, ಕಂದಾಯ ಇಲಾಖಾಧಿಕಾರಿಗಳು ಅನ್ನದಾತ ರೈತರ ಸೇವೆ ಮಾಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಈಗಾಗಲೇ 8,031 ಮಂದಿ ಕಂದಾಯ ಗ್ರಾಮ ಆಡಳಿತಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈಗ ಹೊಸದಾಗಿ 1 ಸಾವಿರ ಮಂದಿ ಸೇರ್ಪಡೆಯಾಗಿದ್ದಾರೆ. ಮತ್ತೆ 500 ಮಂದಿ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗುವುದು. ಒಟ್ಟಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಂತಹಂತವಾಗಿ ನೇಮಕಾತಿ ಮಾಡುವುದಾಗಿ ತಿಳಿಸಿದರು.
ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇರದೆ ಆಯಾ ಗ್ರಾಮಗಳಲ್ಲೇ ವಾಸವಿರಬೇಕು. ಕನಿಷ್ಠ ಗ್ರಾಮ ಪಂಚಾಯಿತಿ ಕೇಂದ್ರದಲ್ಲಾದರೂ ಇರಬೇಕು. ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ಉಳಿದುಕೊಳ್ಳಬೇಕು. ಗ್ರಾಮಗಳಿಗೆ ಹೋದಾಗ ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತುಕೊಳ್ಳುವ ಪರಿಪಾಠವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ಗ್ರಾಮ ಆಡಳಿತಾಧಿಕಾರಿಗಳಿದ್ದಾರೆ. ಅವರೆಲ್ಲರಿಗೂ ಲ್ಯಾಪ್‌ಟ್ಯಾಪ್ ನೀಡಲಾಗುವುದು. ಮೊದಲ ಹಂತದಲ್ಲಿ 4 ಸಾವಿರ ಮಂದಿಗೆ ಲ್ಯಾಪ್‌ಟ್ಯಾಪ್ ನೀಡಲಾಗಿದೆ. ಇದನ್ನು ಬಳಸಿಕೊಂಡು ಜನರಿಗೆ ತ್ವರಿತ ಸೇವೆಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
1 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಲಂಚ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕವಾಗಿ ನೇಮಿಸಲಾಗಿದೆ. ಮುಂದೆಯೂ ನೀವು ಅದೇ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.ಹಿಂದೆ ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ಒಂದು ರೂಪಾಯಿ ಹಣವಿಲ್ಲದೆ ಪ್ರಾಮಾಣಿಕವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇಮಿಸಲಾಗಿತ್ತು ಎಂದು ಸರಿಸಿಕೊಂಡರು.
ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ 6 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಯಲ್ಲಿ ಪಾಸಾಗಿ ಒಂದು ಸಾವಿರ ಮಂದಿ ಆಯ್ಕೆಯಾಗಿದ್ದಾರೆ. ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ನಿಮಗೆ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಕಂದಾಯ ಮಾತೃ ಇಲಾಖೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುವುದು ಅಮೂಲ್ಯ ಅವಕಾಶ. ಒಂದು ರೂಪಾಯಿ ಹಣ ಖರ್ಚಾಗದೇ ಒಂದು ಸಾವಿರ ಮಂದಿ ಗ್ರಾಮ ಆಡಳಿತಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಅವರು ಸರ್ಕಾರದ ಋಣ ತೀರಿಸಬೇಕಾದರೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎಂದು ಹೇಳಿದರು.
ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ 4 ಸಾವಿರ ಲ್ಯಾಪ್‌ಟ್ಯಾಪ್‌ಗಳನ್ನು ನೀಡಲಾಗುತ್ತಿದೆ. ಟಪಾಲುಗಳನ್ನು ತೆಗೆದುಕೊಂಡು ನೀಡುವುದು, ಹೋಗುವುದೇ ಗ್ರಾಮಾಧಿಕಾರಿಗಳಿಗೆ ದಿನಪೂರ್ತಿ ಕೆಲಸವಾಗಿರುತ್ತದೆ. ಕೆಲವೊಮೆ ಕಡತಗಳು ಕಳೆದುಹೋಗಿ ತೊಂದರೆಯಾಗುತ್ತದೆ. ಅರ್ಜಿದಾರರಿಗೆ ಹಾಗೂ ಅಧಿಕಾರಿಗಳಿಗೆ ಅನಗತ್ಯವಾಗಿ ಸಮಯ ವ್ಯರ್ಥವಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ಷಣಾರ್ಧದಲ್ಲಿ ಸೇವೆ ಒದಗಿಸಲು ಅವಕಾಶ ಇರುವಾಗ ಈ ಟಪಾಲು ಎಂಬ ಹಳೆ ಪದ್ಧತಿಯನ್ನು ಈಗಲೂ ಬಳಸುತ್ತಿರುವುದೇಕೆ ಎಂದು ಸಚಿವರು ಪ್ರಶ್ನಿಸಿದರು.
ಈ ಕಾರಣಕ್ಕಾಗಿಯೇ 6 ಸಾವಿರ ಲ್ಯಾಪ್‌ಟ್ಯಾಪ್‌ಗಳನ್ನು ನೀಡಲು ಮುಖ್ಯಮಂತ್ರಿಗಳು ಸಮತಿಸಿದ್ದಾರೆ. ಮೊದಲ ಹಂತದಲ್ಲಿ 4 ಸಾವಿರ ಲ್ಯಾಪ್‌ಟ್ಯಾಪ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಕಂದಾಯ ಇಲಾಖೆಯ ಕೊನೆಯ ಹಂತದ ಸಿಬ್ಬಂದಿ ಗ್ರಾಮ ಆಡಳಿತಾಧಿಕಾರಿಯಿಂದ ಸಚಿವರವರೆಗೂ ಇನ್ನು ಮುಂದೆ ಎಲ್ಲರೂ ಡಿಜಿಟಲೀಕರಣಗೊಳ್ಳಲಿದ್ದಾರೆ ಎಂದರು.
ಇಷ್ಟೇ ಅಲ್ಲದೆ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಪಡೆಯಲು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕಂದಾಯ ಇಲಾಖೆಯ ದಾಖಲೆಗಳಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ 19,500 ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗಿದೆ.
ಈ ವರ್ಷಾಂತ್ಯಕ್ಕೆ ಸುಮಾರು 80 ರಿಂದ 100 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುವುದು. 2025ರ ವೇಳೆಗೆ ಎಲ್ಲಾ ದಾಖಲಾತಿಗಳು ಡಿಜಿಟಲೀಕರಣಗೊಳ್ಳಲಿವೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದರೆ ಆಯಾ ದಾಖಲೆಗಳು ಈಗಾಗಲೇ ಡಿಜಿಟಲೀಕರಣಗೊಂಡಿದ್ದರೆ ದೃಢೀಕೃತ ಪ್ರತಿಯನ್ನು ವಿತರಿಸಲಾಗುವುದು. ಇಲ್ಲದೇ ಹೋದರೆ ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಿ ನಂತರ ವಿತರಿಸಲಾಗುವುದು ಎಂದು ಹೇಳಿದರು. 15 ರಿಂದ 20 ದಿನಗಳ ಅಂತರದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸುವಂತೆ ಸಚಿವರು ಘೋಷಿಸಿದರು.