ಬೆಂಗಳೂರು, ಜ.27- ಕಾಂಗ್ರೆಸ್ ಪಕ್ಷ ಹಾಗೂ ತಮ್ಮ ನಡುವಿನ ಸಂಬಂಧ ಮುಗಿದ ಅಧ್ಯಾಯ ಎಂದಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ, ಉತ್ತರ ಪ್ರದೇಶದ ಚುನಾವಣೆ ಬಳಿಕ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ಸಂಭವಿಸಲಿವೆ ಎಂದಿದ್ದಾರೆ. ನಗರದಲ್ಲಿಂದು ತಮ್ಮ ಮನೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‍ಗೆ ತಮ್ಮಗೆ ಅವಕಾಶ ನೀಡದೆ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಥಾನ ನೀಡಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗಿದೆ.
ಬಿ.ಕೆ.ಹರಿಪ್ರಸಾದ್- ಡಿ.ಕೆ.ಶಿವಕುಮಾರ್ ಇಬ್ಬರ ವಿಚಾರಧಾರೆಗಳು ಒಂದೆ ಆಗಿರುವುದರಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹರಿಪ್ರಸಾದ್ ನೇಮಕವಾಗಿದ್ದಾರೆ. ಈ ಇಬ್ಬರದು ಒಳ್ಳೆಯ ತಂಡ. ತಮಗೂ ಡಿ.ಕೆ.ಶಿವಕುಮಾರ್ ಅವರಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‍ನೊಂದಿಗೆ ನನ್ನ ಸಂಬಂಧ ಮುಗಿದ ಅಧ್ಯಾಯ. ತಬ್ಬಲಿ ನೀ ಆದೆಯ ಎಂಬಂತಾಗಿದೆ ನನ್ನ ಸ್ಥಿತಿ. ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರಂತ ಮಹಾನಾಯಕರನ್ನು ಬಿಟ್ಟು ಬಂದೆ. ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ನಾಮಪತ್ರ ಹಾಕಿಸಿದೆ. ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆ. ಇದಕ್ಕೆ ಒಳ್ಳೆಯ ಪ್ರತಿಫಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇವತ್ತನಿಂದ ಜೋಳಿಗೆ ಧರಿಸಿ ಜನರ ಬಳಿಗೆ ಹೋಗುತ್ತೇನೆ. ಸಾಮಾಜಿಕ ನ್ಯಾಯ ಕೇಳಿದ್ದಕ್ಕೆ ನನಗೆ ಅವಕಾಶ ತಪ್ಪಿಸಿದ್ದಾರೆ. ಕಾಂಗ್ರೆಸ್ ಜೊತೆ ಸಂಬಂಧ ಕಡಿದುಕೊಳ್ಳುವುದಷ್ಟೆ ಅಲ್ಲ ಇನ್ನೂ ಮೂರು ವರ್ಷಗಳ ಅಧಿಕಾರಾವ ಇರುವ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ.
ಬೆಳೆ ಕೊಯ್ದುಕೊಂಡು ನನ್ನನ್ನು ಹೊರ ಹಾಕಿದ್ದಾರೆ ಎಂದು ಅಸಮದಾನ ಪಡಿಸಿದರು. ಮುಂದಿನ ರಾಜಕೀಯ ತೀರ್ಮಾನಗಳ ಬಗ್ಗೆ ಹಲವು ಚಿಂತನೆಗಳಿವೆ. ನಿನ್ನೆಯಿಂದಲೂ ನಿರಂತರವಾಗಿ ದೂರವಾಣಿ ಕರೆಗಳು ಬರುತ್ತಿವೆ. ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡುತ್ತಿದ್ದಾರೆ. ಬಿಹಾರದಿಂದಲೂ ಕರೆಗಳು ಬರುತ್ತಿವೆ. ಉತ್ತರ ಪ್ರದೇಶದ ಅಖಿಲೇಶ್ ಯಾದವ್‍ರ ಸಮಾಜವಾದಿ ಪಕ್ಷ ಅಥವಾ ಮಾಯವತಿ ಅವರ ಬಿಎಸ್‍ಪಿಗೆ ಹೋಗಬೇಕಾ ಅಥವಾ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸೇರಬೇಕಾ ಎಂಬ ಬಗ್ಗೆ ಚರ್ಚೆಗಳಿವೆ.
ಹಿತೈಶಿಗಳ ಜೊತೆ ಸಮಾಲೋಚಿಸಿ ಶೀಘ್ರವೇ ನಿರ್ಧಾರ ಪ್ರಕಟಿಸಲಾಗುವುದು. ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ದೂರವಾಣಿಯಲ್ಲಿ ತಮ್ಮೊಂದಿಗೆ ಮಾತನಾಡಿದರು ಎಂದು ಹೇಳಿದರು. ನನಗೆ ಹಣ ಬಲ, ತೋಲ್ಬಲ ಇಲ್ಲ. ಹೊಳಿಗೆ ಊಟ ಹಾಕಿಸುವ ಸಾಮಥ್ರ್ಯವೂ ಇಲ್ಲ. ಮಾಧ್ಯವದವರೆ ನನಗೆ ರಕ್ಷ ಕವಚ. ಒಂದಷ್ಟು ಸಾಲಗಳಿವೆ, ಏಳೆಂಟು ಮಕ್ಕಳಿದ್ದಾರೆ. ನನ್ನ ಆಸ್ತಿ ಮಾರಿ ಸಾಲ ತೀರಿಸುತ್ತೇನೆ ಎಂದು ಹೇಳಿದರು.
ಈವರೆಗೂ ನಾನು ರಾಜಕೀಯ ಕುರಿತು ಹೇಳಿದ್ದೇಲ್ಲಾ ನಿಜವಾಗುತ್ತಿದೆ. ಉತ್ತರ ಪ್ರದೇಶದ ಸಾರ್ವತ್ರಿಕ ಚುನಾವಣೆ ಬಳಿಕ ಇಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ ಅಥವಾ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎಂದು ಹೇಳಿದರು. ನನಗೆ ಸ್ಥಾನ ತಪ್ಪಿದರ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉತ್ತರ ಕೊಡಬೇಕು. ದೆಹಲಿಯವರು ಏನ್ ಹೇಳಿದ್ದರು ಎಂಬ ಬಗ್ಗೆ ತಮ್ಮ ಬಳಿ ದಾಖಲೆ ಇದೆ.
ಸಂಕ್ರಾಂತಿ ನಂತರ ಉತ್ತಮ ತೀರ್ಮಾನ ಕೊಟ್ಟಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು. ಕಾಂಗ್ರೆಸ್‍ನಲ್ಲಿ ನನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲವನ್ನೂ ಜನ ಮುಂದಿಡುತ್ತೇನೆ ಎಂದು ಎಚ್ಚರಿಸಿದ್ದಾರೆ.
