ಬೆಂಗಳೂರು,ಮಾ.8- ಕಾಂಗ್ರೆಸ್‍ನ ಬಂಡಾಯ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಇಂದು ವಿಧಾನಪರಿಷತ್‍ನ ಕಲಾಪದಲ್ಲಿ ಭಾಗವಹಿಸಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರಶ್ನಿಸಿದರು. ಕಾಂಗ್ರೆಸ್‍ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ವಂಚಿತವಾದ ಬಳಿಕ ಕಲಾಪದಿಂದ ಬಹುತೇಕ ದೂರ ಉಳಿದಿದ್ದ ಅವರು, ಇಂದು ಅಧಿವೇಶನದಲ್ಲಿ ಭಾಗವಹಿಸಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನೀರು ಪೂರೈಕೆ ಬಗ್ಗೆ ಪ್ರಶ್ನಿಸಿದರು.
ಭದ್ರಾವತಿ ಒಂದು ಕಾಲದಲ್ಲಿ ಕೈಲಾಸದಂತಿತ್ತು. ಕುಡಿಯುವ ನೀರಿಗೆ ಕಾರ್ಖಾನೆಯ ಕಲುಷಿತ ನೀರು ಮಿಶ್ರಣವಾಗುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಶಿವಮೊಗ್ಗ ನಗರ ಪಾಲಿಕೆಯ 11 ವಲಯಗಳಿಗೆ 96.50 ಕೋಟಿ ರೂ. ವೆಚ್ಚದಲ್ಲಿ ನೀರು ಸರಬರಾಜು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಜತೆಯಲ್ಲಿ ಹಲವು ಪ್ರದೇಶಗಳಿಗೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ ಅಮೃತ್ ಯೋಜನೆಯಡಿ ಬಾದಾಮಿ, ಹುಬ್ಬಳ್ಳಿ-ಧಾರವಾಡ, ಗದಗ, ಬೆಟ್ಟಗೇರಿ, ಬೀದರ್, ಕಲಬುರಗಿ, ಗಂಗಾವತಿ, ರಾಯಚೂರು, ಭದ್ರಾವತಿ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಕೆಜಿಎಫ್, ಹೊಸಪೇಟೆ, ಮಂಡ್ಯ, ಬಾಗಲಕೋಟೆ ನಗರಗಳಲ್ಲಿ ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳನ್ನು ನಿರ್ವಹಣೆ ಮಾಡಲು 46.25 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
