ಮತ್ತೆ ಆರಂಭವಾಯ್ತು ಸಿಎಂ ಜನತಾದರ್ಶನ, ಜನರ ಕಷ್ಟ ಆಲಿಸಿದ ಕುಮಾರಸ್ವಾಮಿ

Spread the love

CM-Janata-Darshan--01

ಬೆಂಗಳೂರು, ಸೆ.1- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಜನತಾದರ್ಶನ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿಯವರು ಜನರ ನೋವು, ಸಂಕಷ್ಟಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ಯೋಗ, ಆರೋಗ್ಯ ಸಮಸ್ಯೆ, ಪೊಲೀಸ್ ಕಿರುಕುಳ, ಆಸ್ತಿ ಸಮಸ್ಯೆ, ನಿವೇಶನ ಕೋರಿಕೆ, ಮನೆಗಾಗಿ ಮನವಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಅಲ್ಲದೆ ಪೊಲೀಸ್, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಿದರು.

 

ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೂ ಜೆಪಿನಗರದ ನಿವಾಸದ, ಗೃಹ ಕಚೇರಿ ಕೃಷ್ಣಾ, ವಿಧಾನಸೌಧ ಸೇರಿದಂತೆ ಹಲವು ಕಡೆ ಸಾರ್ವಜನಿಕರು ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕಾರ್ಯವನ್ನು ಮುಖ್ಯಮಂತ್ರಿ ಮಾಡುತ್ತಾ ಬಂದಿದ್ದರು. ವಿಧಾನಸೌಧಕ್ಕೆ ಸಾರ್ವಜನಿಕರು ಸಮಸ್ಯೆ ಹೊತ್ತು ಬರುವುದನ್ನು ತಪ್ಪಿಸಲು ಜೆಪಿ ಭವನದಲ್ಲಿ ಪ್ರತಿ ದಿನ ಒಬ್ಬೊಬ್ಬರು ಸಚಿವರು ಸಾರ್ವಜನಿಕರ ಅಹವಾಲು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಿದ್ದರು. ಅಲ್ಲದೆ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಕೂಡ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಆಲಿಸುವಂತೆ ಸೂಚಿಸಿದ್ದರೂ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಾರ್ವಜನಿಕರು ಬೆಂಗಳೂರಿಗೆ ಬರುವುದು ತಪ್ಪುತ್ತಿಲ್ಲ. ಹೀಗಾಗಿ ವಾರದಕ್ಕೊಂದು ದಿನ ಅಧಿಕೃತವಾಗಿ ಜನತಾದರ್ಶನವನ್ನು ಆರಂಭಿಸಿದ್ದಾರೆ. ಇಂದಿನಿಂದ ಪ್ರತಿ ಶನಿವಾರ ಜನತಾದರ್ಶನ ನಡೆಯಲಿದೆ.

Janata--01

ಜನತಾ ದರ್ಶನದ ವಿಷಯ ತಿಳಿದ ರಾಜ್ಯದ ಮೂಲೆಮೂಲೆಗಳಿಂದ ಅಹವಾಲು ಹೊತ್ತು ಬಂದಿದ್ದ ಸಾರ್ವಜನಿಕರು, ಬೆಳಗ್ಗೆಯಿಂದಲೇ ಕೃಷ್ಣಾದ ಎದುರು ಸರತಿ ಸಾಲಿನಲ್ಲಿ ನಿಂತು, ಮುಖ್ಯಮಂತ್ರಿಯವರ ಭೇಟಿಗಾಗಿ ಕಾಯುತ್ತಿದ್ದರು. ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿಯವರ ನಿವಾಸಕ್ಕೆ ನೂರಾರು ಜನರು ಅಹವಾಲು ಹೊತ್ತು ಬರಲು ಆರಂಭಿಸಿದರು. ಆದರೆ ಇದರಿಂದ ಆ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಜನತಾ ದರ್ಶನವನ್ನು ಕೃಷ್ಣಾಗೆ ಸ್ಥಳಾಂತರಿಸಿದ್ದರು. ಆದರೆ ಬಜೆಟ್ ಅಧಿವೇಶನ, ಕೊಡಗು ಪ್ರವಾಹ, ದೇವಾಲಯಗಳ ಭೇಟಿ ಮುಂತಾದ ಕಾರ್ಯಕ್ರಮಗಳಿಂದಾಗಿ ಕಳೆದ ಮೂರು ತಿಂಗಳಲ್ಲಿ ನಿಯಮಿತವಾಗಿ ಜನತಾ ದರ್ಶನ ನಡೆದಿರಲಿಲ್ಲ.

ccm2

ಆದರೆ ಇಂದಿನಿಂದ ವಾರದಲ್ಲಿ ಒಂದು ದಿನ ನಿರಂತರವಾಗಿ ಜನತಾ ದರ್ಶನ ನಡೆಯಲಿದೆ. ಕಳೆದ 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಈಗಲೂ ಅದನ್ನು ಮುಂದುವರಿಸಿ ಜನರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಮೊದಲ ಆದ್ಯತೆ ನೀಡಿದ್ದಾರೆ.

Janata--02

ccm1

Facebook Comments

Sri Raghav

Admin