ಬೆಂಗಳೂರು,ಸೆ.15-ಪೊಲೀಸ್ ಮಹಾನಿರ್ದೇಶಕರ ಕಛೇರಿಯಲ್ಲಿಂದು ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ಪ್ರಮುಖ ಮಾಹಿತಿಯನ್ನು ಅನಾವರಣಗೊಳಿಸಿದ್ದಾರೆ. ವಾಹನಗಳು ಕಳವಾಗಿದ್ದ ಸಂದರ್ಭದಲ್ಲಿ ಮಾಲೀಕರು ಠಾಣೆಗೆ ಭೇಟಿ ನೀಡುವ ಬದಲು ಆನ್ಲೈನ್ನಲ್ಲಿ ಇ-ಎಫ್ಐಆರ್ ದಾಖಲಿಸುವ ಸೌಲಭ್ಯವನ್ನು ಇದೇ ವೇಳೆ ಉದ್ಘಾಟಿಸಲಾಯಿತು.
ಕರ್ನಾಟಕ ರಾಜ್ಯ ಪೊಲಿಸ್ ಅಧಿಕೃತ ಜಾಲತಾಣದ ಸಿಟಿಜೆನ್ ಡೆಸ್ಕ್ ಅಡಿಯಲ್ಲಿ ನಾಗರಿಕ ಕೇಂದ್ರಿತ ತಾಣದಲ್ಲಿ ನೋಂದಾಯಿತರಾಗಿ, ಲಾಗಿನ್ ಆಗುವ ಮೂಲಕ ಮೋಟಾರ್ ವಾಹನ ಕಳವಿಗೆ ಸಂಬಂಧಪಟ್ಟಂಟೆ ದೂರು ದಾಖಲಿಸಿ ಇ-ಎಫ್ಐಆರ್ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಸಾರ್ವಜನಿಕರು ಪೊೀಲಿಸ್ ಠಾಣೆಗೆ ಭೇಟಿ ನೀಡುವ ಸಮಯ ಉಳಿತಾಯಗೊಳ್ಳಲಿದೆ.

ಆನ್ಲೈನ್ನಲ್ಲಿ ವರದಿ ಮಾಡುವುದರಿಂದ ತನಿಖೆಯ ಪ್ರಾರಂಭಿಕ ವೇಗ ಹೆಚ್ಚುತ್ತದೆ. ಕಾಗದ ರಹಿತ ಪರಿಸರ ಸ್ನೇಹಿ ಸೇವೆಯಾಗಿರುವ ವ್ಯವಸ್ಥೆ ಜನಸ್ನೇಹಿಯಾಗಿದೆ. ಸಾರ್ವಜನಿಕರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೋಟೋ ಮತ್ತು ದಾಖಲಾತಿಗಳನ್ನು ಡಿಜಿಟಲ್ ರೂಪದಲ್ಲಿ ಲಗತ್ತಿಸಲು ಸಾಧ್ಯವಾಗುತ್ತದೆ.
ನಾಗರಿಕರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ದತ್ತಾಂಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ನಾಗರಿಕರು ಮತ್ತು ಪೊಲಿಸ್ ಇಲಾಖೆ ನಡುವಿನ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿಯವರು ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಪೊೀಲಿಸ್ ಠಾಣೆಗಳಲ್ಲಿ ಇ-ಚಲನ್ ವ್ಯವಸ್ಥೆ ಅನುಷ್ಠಾನಕ್ಕೆ ತರಲು ಚಾಲನೆ ನೀಡಿದ್ದಾರೆ. ಈ ಉದ್ಧೇಶಕ್ಕಾಗಿ ಬೆಂಗಳೂರು ನಗರ ಸಂಚಾರ ವಿಭಾಗಕ್ಕೆ 700 ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ (ಪಿಡಿಎ) ಉಪಕರಣಗಳನ್ನು ಹಾಗೂ ರಾಜ್ಯಾದ್ಯಾಂತ ಎಲ್ಲಾ ಪೊೀಲಿಸ್ ಠಾಣೆಗಳಿಗೆ ತಲಾ 2, ಸಂಚಾರಿ ಪೊೀಲಿಸ್ ಠಾಣೆಗಳಿಗೆ ತಲಾ 5 ಉಪಕರಣಗಳನ್ನು ಹಂಚಿಕೆ ಮಾಡಲಾಗಿದೆ. ಡಿಜಿಟಲ್ ಸಂಟಾರ ದಂಡ ವಸೂಲಾತಿಯನ್ನು ರಾಜ್ಯದ ಮೂಲೆ ಮೂಲೆಯಲ್ಲಿ ವಿಸ್ತರಿಸುವಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಇ-ಚಲನ್ ಜಾರಿ
ಇ-ಚಲನ್ ವ್ಯವಸ್ಥೆಯನ್ನು ಖಜಾನೆಯೊಂದಿಗೆ ಸಂಯೋಜನೆಗೊಳಿಸಿರುವ ಮೊದಲ ರಾಜ್ಯವು ಕರ್ನಾಟಕವಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಬಳಸಿ ಸಂಗ್ರಹಿಸಿದ ದಂಡದ ಮೊತ್ತವನ್ನು ಎಸ್ಬಿಐ ಮೂಲಕ ಖಜಾನೆಗೆ ವರ್ಗಾಹಿಸಲಾಗುತ್ತಿದೆ.
ಎಸ್ಬಿಐ ಮತ್ತು ರಾಜ್ಯ ಖಜಾನೆಯವರು ತಲಾ 2500 ಪಿಡಿಎ ಉಪಕರಣಗಳನ್ನು ಪ್ರಾಯೋಜಿಸಲು ಮುಂದೆ ಬಂದಿದ್ದಾರೆ. ಅಸ್ತಿತ್ವದಲ್ಲಿರುವ ಇ-ಚಲನ್ ವ್ಯವಸ್ಥೆಯು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಡಿಜಿಟಲ್ ರೂಪದಲ್ಲಿ ದಂಡ ಪಾವತಿಯ ಸೌಲಭ್ಯ ಒದಗಿಸುತ್ತಿದೆ. ಇದರಲ್ಲಿ ಪಾರದರ್ಶಕತೆ ಪರಿಣಾಮಕಾರಿಯಾಗಿರುತ್ತದೆ. ನವೆಂಬರ್ 1 ರಿಂದ ರಾಜ್ಯದೆಲ್ಲೆಡೆ ಕಾರ್ಯಗತಗೊಳಿಸಲಾಗುತ್ತದೆಂದು ತಿಳಿಸಲಾಗಿದೆ.

ಆಂಟಿ ಫೋರೆನ್ಸಿಕ್
ಇದೇ ವೇಳೆ ಮುಖ್ಯಮಂತ್ರಿಯವರು ಆಂಟಿ ಫೋರೆನ್ಸಿಕ್ ವಿಷಯದಲ್ಲಿ ಅಭಿವೃದ್ಧಿಪಡಿಸಲಾದ ತಾಂತ್ರಿಕ ಸಂಶೋಧನಾ ವರದಿಯನ್ನು ಅನಾವರಣಗೊಳಿಸಿದರು. ಡಿಜಿಟಲ್ ಫೋರೆನ್ಸಿಕ್ ಕ್ಷೇತ್ರವು ಪೊಲಿಸರಿಗೆ ಕ್ಲಿಷ್ಟಕರವಾಗಿದೆ. ಅಪರಾಧಗಳ ತನಿಖೆಯಲ್ಲಿ ಸುಸಂಬದ್ದ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಆದಾಗ್ಯೂ ತಂತ್ರಜ್ಞಾನ ವಿಕಸನಗೊಂಡಂತೆ ದಾಳಿಕೋರರು ತಮ್ಮ ಕುರುಹುಗಳನ್ನು ಮರೆಮಾಚಲು ಬಳಸುವ ವಿಧಾನಗಳು ಸುಧಾರಣೆಗೊಂಡಿವೆ.
ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು CWRC ಸೂಚನೆ, 18ರಂದು ಮಹತ್ವದ ಸಭೆ
ಆಂಟಿ ಫಾರೆನ್ಸಿಕ್ ತಂತ್ರಗಳು ಜಗತ್ತಿನಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಸವಲಾಗಿದೆ. ಅಪರಾಗಳಿಗಿಂತ ತನಿಖಾಕಾರಿಗಳು ಒಂದು ಹೆಜ್ಜೆ ಮುಂದೆ ಇರುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಿಐಡಿ, ಡಾಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇನ್ಪೋಸಿಸ್ ಪೌಂಢೇಷನ್ನ ಸಹಬಾಗಿತ್ವದಲ್ಲಿ ತಾಂತ್ರಿಕ ವರದಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ದತ್ತಾಂಶ ದ್ವಂಸಗೊಳಿಸುವಿಕೆ, ಸಮಯ ತಿರುಚುವುದು, ವಿದ್ಯುನ್ಮಾನ ಸಾಕ್ಷ್ಯಗಳ ಕುರುಹು ನಾಶಪಡಿಸುವುದು ಸೇರಿದಂತೆ ಇತರ ವಿಷಯಗಳಲ್ಲಿ ಆಳವಾದ ಮಾಹಿತಿ ನೀಡುತ್ತಿದೆ. ಸಮಕಾಲೀನ ಬೆಳವಣಿಗೆಗಳು ಹಾಗೂ ಅಭಿಯೋಜನೆ ಹಂತದಲ್ಲಿ ಅಮೂಲ್ಯ ಕೈಪಿಡಿಯಾಗಿದೆ.
#CMSiddaramaiah, #launches, #service, #filing, #eFIR, #online, #KarnatakaPolice,