ಬೆಂಗಳೂರು,ಜ.18- ರಾಜ್ಯದಲ್ಲಿ ವಾರಾಂತ್ಯದ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಮುಂದುವರೆಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಜೆ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿರುವ ಅವರು ಆಯಾ ಜಿಲ್ಲೆಗಳ ಕೋವಿಡ್ ಪ್ರಕರಣಗಳ ಸಂಖ್ಯೆ, ಸಾವಿನ ಪ್ರಮಾಣ, ಓಮಿಕ್ರಾನ್, ಪಾಸಿವಿಟಿ ದರ, ಆಸ್ಪತ್ರೆಯಲ್ಲಿ ಬೆಡ್‍ಗಳ ಲಭ್ಯತೆ, ಶಾಲಾಕಾಲೇಜುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವರು.
ನಿನ್ನೆಯಷ್ಟೇ ಸಚಿವರು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಿದ್ದ ಸಿಎಂ ಅವರು ಇಂದು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಈ ತಿಂಗಳ 25ಕ್ಕೆ ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಎಚ್ಚರಿಸಿದೆ. ಅಲ್ಲಿಯವರೆಗೂ ಈಗಿರುವ ಯಾವುದೇ ನಿಯಮಗಳಲ್ಲಿ ಬದಲಾವಣೆ ಮಾಡದಂತೆ ಸಲಹೆಯನ್ನು ಮಾಡಿದೆ.
ಇದೇ 21ರಂದು ಪುನಃ ಮತ್ತೊಂದು ತುರ್ತು ಸಭೆ ನಡೆಸಲಿರುವ ಬೊಮ್ಮಾಯಿ ಅವರು ವಾರಂತ್ಯದ ಲಾಕ್‍ಡೌನ್ ಬೇಡವೇ ಇಲ್ಲವೇ ಮುಂದುವರೆಸಬೇಕೇ? ರಾತ್ರಿ ಕಫ್ರ್ಯೂವನ್ನು ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದುವರೆಗೂ ಪತ್ತೆಯಾಗುತ್ತಿರುವ ಕೋವಿಡ್ ಸೋಂಕಿತರಲ್ಲಿ ಬೆಂಗಳೂರು ಮಹಾನಗರವೊಂದರಲ್ಲೇ ಶೇ.75ರಿಂದ 80ರಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ.
ಐದಾರು ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ಹೆಚ್ಚಳವಾಗಿದ್ದು ಹಾಗೂ ಕೆಲವು ಜಿಲ್ಲೆಗಳಲ್ಲಿ ಇನ್ನು 2ನೇ ಲಸಿಕೆ ಪ್ರಮಾಣ ಪಡೆಯಲು ಜನರು ಹಿಂದೇಟು ಹಾಕುತ್ತಿರುವುದರಿಂದ ಇದರ ಪ್ರಮಾಣವನ್ನು ಹೆಚ್ಚಳ ಮಾಡಲು ಸಿಎಂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ.
ಹೊರರಾಜ್ಯಗಳಿಂದ ಪ್ರಮುಖವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಬೇರೆ ಬೇರೆ ಭಾಗಗಳಿಂದ ಕೆಲಸಕಾರ್ಯಗಳಿಗೆ ಕರ್ನಾಟಕಕಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಲು ಸೂಚಿಸುವರು.
ಹೊರರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಿರುವುದು, ಲಸಿಕೆ ಪಡೆದಿರುವ ಪ್ರಮಾಣ ಪತ್ರ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಬೇಕು. ಉಳಿದಂತೆ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು, ಮಾರುಕಟ್ಟೆ, ಸಿನಿಮಾ ಮಂದಿರಗಳು, ಈಜುಕೊಳ, ಕ್ಲಬ್‍ಗಳು ಸೇರಿದಂತೆ ಮತ್ತಿತರ ಕಡೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಸೂಚನೆ ನೀಡಲಿದ್ದಾರೆ.
ಕರ್ನಾಟಕ ಅತಿಹೆಚ್ಚು ಸೋಂಕು ಪೀಡಿತ ರಾಜ್ಯಗಳ ಪೈಕಿ ಮೊದಲ ಐದು ಸ್ಥಾನಗಳಲ್ಲಿರುವುದರಿಂದ ಹೆಚ್ಚು ನಿಗಾವಹಿಸುವಂತೆ ಕೇಂದ್ರ ಸರ್ಕಾರವು ಸೂಚನೆ ಕೊಟ್ಟಿದೆ. ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಖುದ್ದು ಸರ್ಕಾರಕ್ಕೂ ತಲೆ ನೋವಾಗಿದೆ.
ಇಂದು ನಡೆಯಲಿರುವ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಈಗಿರುವ ಮಾರ್ಗಸೂಚಿಗಳ ಜೊತೆಗೆ ಕೆಲವು ಕಠಿಣ ನಿಯಮಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡುವ ಸಾಧ್ಯತೆ ಹೆಚ್ಚಾಗಿದೆ.
