ಬೆಂಗಳೂರು,ಜ.9- ಐದು ವರ್ಷ ಆಡಳಿತದಲ್ಲಿದ್ದಾಗ ಯಾವುದೇ ನೀರಾವರಿ ಯೋಜನೆ ಮಾಡದೆ ಈಗ ಬೆಟ್ಟ ಅಗೆದು ಇಲಿ ಹಿಡಿಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್‍ನ ಪಾದಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಒಂದೇ ಒಂದು ವಿಸ್ತೃತ ಯೋಜನಾ ವರದಿ(ಡಿಪಿಆರ್) ಮಾಡಲು ಸಾಧ್ಯವಾಗಲಿಲ್ಲ. ನಾವು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ ಎಂಬ ಅಪರಾಧ ಮನೋಭಾವನೆ ಅವರಿಗೆ ಕಾಡುತ್ತಿದೆ. ಹೀಗಾಗಿಯೇ ಪಾದಯಾತ್ರೆ ಹೊರಟಿದ್ದಾರೆ ಎಂದು ಕುಹುಕವಾಡಿದರು.
ಸಮ್ಮಿಶ್ರ ಸರ್ಕಾರವಿದ್ದಾಗ ಒಂದು ಡಿಪಿಆರ್ ಕಳುಹಿಸಿದ್ದನ್ನು ಬಿಟ್ಟರೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಮಾಡಿದ್ದಾದರೂ ಏನು? ನಮ್ಮ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ದವಾಗಿದೆ.ಎಲ್ಲ ಸಂದರ್ಭಗಳಲ್ಲೂ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ಜನರಿಗಾಗಿ ಮಾಡುತ್ತಿರುವ ಪಾದಯಾತ್ರೆ ಅಲ್ಲ. ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಹೋರಾಟವಾಗಿದೆ. ಇಂತಹ ನಾಟಕಗಳಿಗೆ ಜನರು ಸೊಪ್ಪು ಹಾಕುವುದಿಲ್ಲ. ನಿಮ್ಮ ಪಾದಯಾತ್ರೆಯಿಂದ ಯಾರಿಗೂ ತೊಂದರೆಯಿಲ್ಲ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇದನ್ನು ಜನತೆ ತೀವ್ರವಾಗಿ ಖಂಡಿಸಲೇಬೇಕು. ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಎಂಬ ಘೋಷ ವಾಕ್ಯ ಏನಾಯಿತು ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ಈ ಯೋಜನೆ ಅನುಷ್ಠಾನಕ್ಕಾಗಿ ನಾವು ಸರ್ವಪ್ರಯತ್ನ ನಡೆಸಿದ್ದೇವೆ. ಇದು ಕಾನೂನು ಅಡಿಯೇ ಆಗಬೇಕು. ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದ್ದು, ಪರಿಸರ ಇಲಾಖೆ ಅನುಮೋದನೆ ಕೊಡಬೇಕು, ತಮಿಳುನಾಡು ಸರ್ಕಾರ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಿದೆ. ಇವೆಲ್ಲವೂ ಇತ್ಯರ್ಥವಾಗಬೇಕಲ್ಲವೇ ಎಂದು ಸಿಎಂ ಪ್ರಶ್ನಿಸಿದರು.
ಕಾಂಗ್ರೆಸ್‍ನವರು ಬದ್ದತೆಯಿಂದ ಕೆಲಸ ಮಾಡಿದ್ದರೆ ಈ ಯೋಜನೆ ವಿಳಂಬ ಮಾಡುತ್ತಿರಲಿಲ್ಲ. ಕಡೇ ಪಕ್ಷ ಕಳೆದ ನಾಲ್ಕು ವರ್ಷಗಳ ಅವಯಲ್ಲಿ ಅವೇಶನ ವೇಳೆ ಈ ಯೋಜನೆ ಬಗ್ಗೆ ಕೈ ಪಕ್ಷದ ನಾಯಕರು ಎಷ್ಟು ಬಾರಿ ಚರ್ಚೆ ಮಾಡಿದ್ದಾರೆ ಎಂದು ಹರಿಹಾಯ್ದರು.
ಪ್ರಾರಂಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದಾಗಿ ಹೇಳಿದ್ದ ನಾಯಕರು ಈಗ ಎಲ್ಲವನ್ನೂ ಉಲ್ಲಂಘನೆ ಮಾಡಿದ್ದಾರೆ. ಅಕಾರಿಗಳು ಈ ಕುರಿತು ನೋಟಿಸ್ ನೀಡಿದ್ದಾರೆ.
ನಿಯಮಗಳನ್ನು ಮೀರಿ ಹೆಚ್ಚು ಜನರನ್ನು ಸೇರಿಸಿದ್ದಾರೆ. ಇದರಿಂದ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ. ನಿಯಮಗಳನ್ನು ಪಾಲನೆ ಮಾಡಿಕೊಂಡು ಪಾದಯಾತ್ರೆ ನಡೆಸಿ ಜನರ ಜೀವಕ್ಕಿಂತ ನಿಮ್ಮ ರಾಜಕೀಯವೇ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಿಯಮಗಳನ್ನು ಉಲ್ಲಂಘಿಸಿದರೆ ನಾವು ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಜಿಲ್ಲಾಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಇದನ್ನು ಪಾಲನೆ ಮಾಡಬೇಕೆಂದು ಹೇಳಿದರು.
