ಮೈಸೂರು, ಸೆ.22- ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರ್ಧಕ್ಕೆ ಎದ್ದು ಹೋಗುತ್ತಿದ್ದ ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿ ಕೂರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ದಸರಾ ಆಚರಣೆಯಲ್ಲಿ ಯಾವುದೇ ಲೋಪಗಳಾಗಬಾರದು ಎಂಬ ಕಾರಣಕ್ಕೆ ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಕ್ರಮ ಅಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಭಾಷಣ ಮಾಡುವಾಗಲೇ ಕೆಲವು ಮಹಿಳೆಯರು ಕಾರ್ಯಕ್ರಮದಿಂದ ನಿರ್ಗಮಿಸಲಾರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಟಿ.ದೇವೇಗೌಡ ಸ್ವಲ್ಪ ಹೊತ್ತು ಸಹನೆಯಿಂದಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸಿದ್ದರು. ಆಗಲೂ ಜನ ಎದ್ದು ಹೋಗಲಾರಂಭಿಸಿದಾಗ ಸಿಎಂ ಸಿಡಿಮಿಡಿಯಾಗಿ ಗದರಿದರು. ಒಂದು ಬಾರಿ ಹೇಳಿದರೆ ಗೊತ್ತಾಗುವುದಿಲ್ಲವೇ? ಏಕೆ ಬರುತ್ತೀರಿ ಇಲ್ಲಿಗೆ? ಮನೆಯಲ್ಲಿರಬೇಕಿತ್ತು. ಏ ಪೊಲೀಸ್‌ನವರೇ ಅವರನ್ನು ಹೊರಗೆ ಬಿಡಬೇಡಿ ಕರೆದು ಕೂರಿಸಿ ಎಂದು ತಾಕೀತು ಮಾಡಿದರು. ಅರ್ಧಗಂಟೆ, ಒಂದು ಗಂಟೆ ಕೂರಲಾಗದಿದ್ದರೆ ಕಾರ್ಯಕ್ರಮಕ್ಕೆ ಏಕೆ ಬರುತ್ತೀರಾ ಎಂದು ಸಿದ್ದರಾಮಯ್ಯ ಗರಂ ಆದರು.