ದೆಹಲಿಗೆ ತೆರಳುವ ದಿನಾಂಕ ಇನ್ನು ನಿಗದಿಯಾಗಿಲ್ಲ : ಸಿಎಂ ಬಿಎಸ್‍ವೈ

ಬೆಂಗಳೂರು,ಸೆ.8- ಮಳೆಗಾಲದ ಅಧಿವೇಶನದ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ಮಾಡಲಾಗಿದ್ದು, ದೆಹಲಿಗೆ ತೆರಳುವ ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.21ರಿಂದ ಪ್ರಾರಂಭವಾಗಲಿರುವ ಅಧಿವೇಶನದ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಅಧಿವೇಶನದಲ್ಲಿ ರಾಜ್ಯದ ಅತಿವೃಷ್ಟಿ ಕುರಿತು ವಾಸ್ತವಾಂಶಗಳನ್ನು ತಿಳಿಸುತ್ತೇವೆ ಎಂದರು.

ಕೇಂದ್ರದ ಅಧ್ಯಯನ ತಂಡ ರಾಜ್ಯದ ಅತಿವೃಷ್ಟಿ ಪ್ರದೇಶಗಳಲ್ಲಿ ಅಧ್ಯಯನ ಕೈಗೊಂಡಿದೆ. ತಂಡದೊಂದಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಇದ್ದು ಸೂಕ್ತ ಮಾಹಿತಿಯನ್ನು ಒದಗಿಸಿದ್ದಾರೆ.  ಕಳೆದ ವರ್ಷ ಅತಿವೃಷ್ಟಿಯಿಂದ ಏನೇನು ಆಗಿತ್ತು ಅದರ ಮಾಹಿತಿಯನ್ನು ಕೊಟ್ಟಿದ್ದೇವೆ.

ಕೇಂದ್ರದ ಅಧ್ಯಯನ ತಂಡ ಏನು ವರದಿ ಸಲ್ಲಿಸುತ್ತದೆ ಕಾದು ನೋಡೋಣ. ವರದಿ ಸಲ್ಲಿಕೆಯಾದ ನಂತರ ದೆಹಲಿಗೆ ತೆರಳಿ ವಾಸ್ತವಾಂಶವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಅನಾಹುತದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.