ನಾಡದೇವತೆಗೆ ಪುಷ್ಪಾರ್ಚನೆ ಮಾಡಿ ಪ್ರವಾಹ ಸಂತ್ರಸ್ತರಿಗೆ ಅಭಯ ನೀಡಿದ ಸಿಎಂ ಬಿಎಸ್‍ವೈ

ಬೆಂಗಳೂರು,ಅ.17-ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣೆ ಹಾಗೂ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಸರ್ಕಾರ ಬದ್ದವಾಗಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಯ ನೀಡಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ರಾಜ್ಯದ ನೆರೆ ಪರಿಸ್ಥಿತಿ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದ್ದೇನೆ.

ಕರ್ನಾಟಕ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ದವಿದೆ ಎಂದು ಹೇಳಿದ್ದಾರೆ. ಹೀಗಾಗಿ ಯಾರೊಬ್ಬರೂ ಚಿಂತೆಗೀಡಾಗಬಾರದು ಎಂದು ಮನವಿ ಮಾಡಿದರು.  ವಿಶ್ವ ವಿಖ್ಯಾತ ನಾಡಹಬ್ಬ ದಸರಾಕ್ಕೆ ಸಾಂಸ್ಕøತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಬೆಳಗ್ಗೆ 7.55ಕ್ಕೆ ಸಲ್ಲುವ ಬ್ರಾಹ್ಮಿ ಶುಭ ಲಗ್ನದಲ್ಲಿ ನಾಡದೇವತೆಯ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ 9 ದಿನಗಳ ನವರಾತ್ರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಉಂಟಾಗಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕಕ್ಕೆ ಬೇಕಾದ ನೆರವು ನೀಡಲು ಸಿದ್ದ ಎಂದು ಮೋದಿಯವರೇ ಹೇಳಿದ್ದಾರೆ. ದಸರಾ ಹಬ್ಬದಂತಹ ಸಂದರ್ಭದಲ್ಲಿ ಪ್ರಧಾನಿಯವರಿಂದಲೇ ಈ ಆಶ್ವಾಸನೆ ಸಿಕ್ಕಿರುವುದರಿಂದ ನಮಗೆ ತುಸು ನೆಮ್ಮದಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರವಾಹಪೀಡಿತ ಸ್ಥಳಗಳಿಗೆ ನಿನ್ನೆಯಷ್ಟೇ ಕಂದಾಯ ಸಚಿವ ಅಶೋಕ್ ಭೇಟಿಕೊಟ್ಟು ಸಂತ್ರಸ್ತರ ಸಂಕಷ್ಟಗಳನ್ನು ಆಲಿಸಿದ್ದಾರೆ. ಸದ್ಯದ ಪ್ರಾಥಮಿಕ ಅಂದಾಜಿನ ಪ್ರಕಾರ ಪ್ರವಾಹದಿಂದಾಗಿ ರಾಜ್ಯದಲ್ಲಿ ಒಟ್ಟು 9952 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸರ್ಕಾರ ಎಲ್ಲ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಿದ್ದವಿದೆ. ಕರ್ನಾಟಕವನ್ನು ಆರ್ಥಿಕವಾಗಿ ಸದೃಢಗೊಳಿಸಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.  ರಾಜ್ಯ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವಾಗಲೇ ಈ ನಾಡ ಹಬ್ಬ ದಸರಾವನ್ನು ಆಚರಿಸುತ್ತಿದ್ದೇವೆ. ನಾಡದೇವತೆ ಚಾಮುಂಡಿಯ ಸನ್ನಿಧಿಯಲ್ಲಿ ನಾವೆಲ್ಲರೂ ಕೊರೊನಾ ನಿವಾರಣೆಗಾಗಿ ಪ್ರಾರ್ಥಿಸೋಣ ಎಂದು ಜನತೆಗೆ ಮನವಿ ಮಾಡಿದರು.

ಮೈಸೂರು ದಸರಾದ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಅತ್ಯಂತ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಜನರಿಗೆ ಸಮಸ್ಯೆಯಾಗದಂತೆ ಉದ್ಘಾಟನೆಯನ್ನು ನೆರವೇರಿಸಿದ್ದೇವೆ. ಹಬ್ಬ ಮುಗಿಯುವವರೆಗೂ ಹೆಚ್ಚು ಜನರು ಸೇರದಂತೆ ಅವರು ಮನವಿ ಮಾಡಿದರು.

ಕೊರೊನಾ ಕಾರಣಕ್ಕಾಗಿಯೇ ಕೊರೊನಾ ವಾರಿಯರ್ಸ್‍ನಿಂದ ದಸರಾ ಉದ್ಘಾಟಿಸಲಾಗಿದೆ. ಇಂದು ಸನ್ಮಾನಕ್ಕೆ ಒಳಪಟ್ಟಿರುವ ವಾರಿಯರ್ಸ್‍ಗೆ ಅಭಿನಂದನೆ ಸಲ್ಲಿಸುತ್ತೇನೆ. ಕೊರೊನಾ ಮಹಾಮಾರಿಗೆ ಲಸಿಕೆ ಸಿಗುವವರೆಗೂ ಜನರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.  ನೀವು ಜಾಗೃತರಾಗುವುದರ ಜೊತೆಗೆ ಇತರರನ್ನು ಜಾಗೃತಗೊಳಿಸಿ. ಆಗ ಮಾತ್ರ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಸಾಂಸ್ಕøತಿಕ ನಗರಿ ಮೈಸೂರು ನಗರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಸರಾ ಹಬ್ಬದ ಅಂಗವಾಗಿ ವಿಶೇಷ ಕೊಡುಗೆಗಳನ್ನು ನೀಡಿದರು. ವೇದಿಕೆಯಲ್ಲಿ ಸಚಿವರು, ಶಾಸಕರು, ಸಂಸದರು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಬಿಎಸ್‍ವೈ, ಚಾಮುಂಡಿ ಬೆಟ್ಟಕ್ಕೆ ತುರ್ತಾಗಿ 7.5 ಕೋಟಿ, ದೇವಿಕೆರೆ ಮತ್ತು ಮೆಟ್ಟಿಲುಗಳ ಅಭಿವೃದ್ಧಿಗೆ ಶೀಘ್ರ ಮಂಜೂರಾತಿ ನೀಡಿ, ದೇವಾಲಯದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದರು.

ಉದ್ಘಾಟನೆಗೂ ಮುನ್ನ ಇಂದು ಬೆಳಗಿನ ಜÁವದಿಂದಲೇ ಚಾಮುಂಡೇಶ್ವರಿ ತಾಯಿಗೆಗೆ ರುದ್ರಾಭಿಷೇಕ, ಪಂಚಾಮೃತಭಿಷೇಕ, ಮಹಾನ್ಯಾಸ ಸೇರಿದಂತೆ ವಿವಿಧ ಪೂಜೆಗಳು ನಡೆದವು.
ಈ ಬಾರಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಸಹ ನಡೆದಿದೆ. ದೇಗುಲದಿಂದ ಹೊರಗಿರುವ ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ಅಧಿದೇವತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಗಣ್ಯರು ಪಷ್ಪಾರ್ಚನೆ ಮಾಡಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ: ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆ ನೆರವೇರಿಸಿದರು. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಸಂಸರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್,

ಅಡಗೂರು ಎಚ್.ವಿಶ್ವನಾಥ್, ನಿರಂಜನಕುಮಾರ್, ಎಲ್.ನಾಗೇಂದ್ರ, ಎನ್. ಮಹೇಶ್, ಹರ್ಷವರ್ಧನ್, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಮ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆರು ಮಂದಿ ಕೊರೋನಾ ಯೋಧರನ್ನು ಸನ್ಮಾನಿಸಲಾಯಿತು.