ಬಲವಂತದ ಬಂದ್ ಸಹಿಸಲ್ಲ: ಸಿಎಂ ಬಿಎಸ್‌ವೈ

Spread the love

ಬೆಂಗಳೂರು,ನ.21- ಮರಾಠ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಸಿ ಕನ್ನಡಪರ ಸಂಘಟನೆಗಳು ಡಿ.5ರಂದು ನೀಡಿರುವ ಕರ್ನಾಟಕ ಬಂದ್ ವೇಳೆ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಗಳು ಶಾಂತಿಯುತವಾಗಿರಬೇಕು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕಣ್ಮುಚಿ ಕೂರಲು ಸಾಧ್ಯವಿಲ್ಲ ಎಂದು ಗುಡುಗಿದರು.  ನಾನು ಈಗಲೂ ಕೂಡ ಕನ್ನಡಪರ ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಡಿ.5ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕೈಬಿಡಬೇಕು.

ನನ್ನ ಜೊತೆ ಚರ್ಚೆಗೆ ಬನ್ನಿ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಪರಿಹರಿಸುತ್ತೇನೆ. ಆದರೆ ಕಾನೂನು ಬಿಟ್ಟು ಹೋರಾಟ ನಡೆಸುತ್ತೇನೆ ಎಂದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಮ್ಮ ಸರ್ಕಾರ ಕನ್ನಡಿಗರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಿದೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಬಗ್ಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಕನ್ನಡ ಚಳುವಳಿಗಾರರು ಕೂಡಲೇ ನನ್ನೊಂದಿಗೆ ಚರ್ಚಿಸಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬಹುದು. ಸುಮ್ಮನೆ ವದಂತಿಗಳನ್ನು ಹಬ್ಬಿಸಬೇಡಿ.

ಕೆಲವರು ಪ್ರತಿಭಟನೆ ನೆಪದಲ್ಲಿ ಬೆಂಕಿ ಹಚ್ಚುವುದು, ಪ್ರತಿಕೃತಿ ದಹಿಸುವುದು, ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಜಾತಿ, ಮತ, ಬೇಧಭಾವ ಮಾಡದೆ ಎಲ್ಲರೂ ಸಮಾನರು ಎಂಬಂತೆ ನೋಡುತ್ತಿದ್ದೇವೆ. ಗೊಂದಲಗಳಿದ್ದರೆ ನನ್ನ ಬಳಿಗೆ ಬಂದು ಮುಕ್ತವಾಗಿ ಚರ್ಚಿಸಬಹುದು ಎಂದರು.  ಮರಾಠ ಸಮುದಾಯ ಅಭಿವೃದ್ದಿ ನಿಗಮ ಆದೇಶವನ್ನು ಹಿಂಪಡೆಯಲಿದ್ದೀರಾ ಎಂಬ ಪ್ರಶ್ನೆಗೆ, ಬಿಎಸ್‍ವೈ ಪ್ರತಿಕ್ರಿಯೆ ಕೊಡಲಿಲ್ಲ.

Facebook Comments