ಪ್ರತಿಯೊಬ್ಬ ರೈತರ ಸ್ವಾವಲಂಬನೆ ಸರ್ಕಾರದ ಗುರಿ : ಸಿಎಂ ಬಿಎಸ್‍ವೈ

ಬೆಂಗಳೂರು,ಡಿ.25- ರಾಜ್ಯ ಸರ್ಕಾರ ನಾಡಿನ ಪ್ರತಿಯೊಬ್ಬ ರೈತರ ಕಣ್ಣೊರೆಸಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅನ್ನದಾತರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶ್ವಾಸನೆ ನೀಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಯಶವಂತಪುರದ ಎಪಿಎಂಸಿ ಆವರಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತರ ಆದಾಯ ದ್ವಿಗುಣವಾಗಲಿದೆ. ಗೌರವದಿಂದ ಬದುಕಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ದೇಶದ ಅನ್ನದಾತನ ಆದಾಯವನ್ನು ದ್ವಿಗುಣಗೊಳಿಸುವ ಏಕೈಕ ಕಾರಣಕ್ಕಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಆದರೆ ಕೆಲವು ಸ್ವಾರ್ಥಿಗಳು ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

50 ವರ್ಷಗಳ ಹಿಂದೆ ಶಿಕಾರಿಪುರದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗಾಗಿ ನಾನು ಅಹೋರಾತ್ರಿ ಹೋರಾಟ ಮಾಡಿದ್ದೆ. ನನ್ನ ಪೂರ್ವ ಜನ್ಮದ ಪುಣ್ಯ ಎಂಬಂತೆ ಇಂದು ನಾನೇ ಮುಖ್ಯಮಂತ್ರಿಯಾಗಿ ಈ ಕಾಯ್ದೆಯನ್ನು ಜಾರಿ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂದಿನ ದಿನವನ್ನು ಗುಡ್ ಗೌರ್ನರ್ಸ್ ದಿನವಾಗಿಯೂ ಆಚರಿಸಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಎರಡು ಸಾವಿರ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. 9 ಕೋಟಿ ರೈತರಿಗೆ ಮಧ್ಯವರ್ತಿಗಳು ಇಲ್ಲದೆ ಒಟ್ಟು 18 ಸಾವಿರ ಕೋಟಿ ಅವರ ಖಾತೆಗೆ ಪಾವತಿಯಾಗಲಿದೆ ಎಂದು ತಿಳಿಸಿದರು.

ದೇಶದ ಯಾವುದೇ ಭಾಗದಲ್ಲೂ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಶೇ.70ರಷ್ಟು ರೈತರು ಎಪಿಎಂಸಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಕೆಲವು ಸ್ವಾರ್ಥಿಗಳು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ದಿಕ್ಕುತಪ್ಪಿಸುವವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

ಇಂದು ಮಾಜಿ ಪ್ರಧಾನಿ ಅಟಲ್ ಜೀ ಅವರ ಜನ್ಮದಿನ. ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ವಾಜಪೇಯಿ ಜನ್ಮದಿನಕ್ಕೆ ಅರ್ಪಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು. ಸರ್ಕಾರದ ಸೌಲಭ್ಯಗಳನ್ನು ಚೆಕ್ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾವಣೆ ಮಾಡಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಇರುವುದರಿಂದ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುತ್ತವೆ ಎಂದು ಹೇಳಿದರು.

ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಮಾತನಾಡಿ, ರೈತರಿಗಾಗಿ ಪ್ರಧಾನಿಗಳು ಹಲವು ಕಾರ್ಯಕ್ರಮ ಕೈಗೊಂಡಿದ್ದಾರೆ. ರೈತರ ಸ್ವಾಭಿಮಾನಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ರೈತರ ಶ್ರಮದ ಬೆಳೆಯಲ್ಲಿ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಿದ್ದರು. ಅನ್ನದಾತ ಸ್ವಾಭಿಮಾನಿಯಾಗಿರಲು ಕೃಷಿ, ಎಪಿಎಂಸಿ ಕಾಯ್ದೆ ತರಲಾಗಿದೆ. ಆದರೆ ವಿರೋಧಿಗಳು ರೈತರು ಸ್ವಾಭಿಮಾನಿಯಾಗಿರಲು ಒಪ್ಪುತ್ತಿಲ್ಲ. ರೈತರ ಪರ ಈ ಸರ್ಕಾರ ಮುಂದೆಯೂ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶದ ಆಚಾರ, ವಿಚಾರ, ಸಂಸ್ಕೃತಿಗಳಿಗೆ ಪ್ರತಿಬಿಂಬವಾಗಿ ಕೆಲಸ ಮಾಡಿದ್ದರು. ಪ್ರಧಾನಿ ಮೋದಿಯವರು, ವಾಜಪೇಯಿ ಅವರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರೈತರ ಪರವಾಗಿ ಹೋರಾಟ ಮಾಡಿದ ಯಡಿಯೂರಪ್ಪನವರು ರೈತರ ಕಷ್ಟ ಗೊತ್ತಾಗಿಯೇ ಈ ಕಾಯಿದೆ ತಂದಿದ್ದಾರೆ.

ಇವತ್ತು ಅತ್ಯಂತ ಸಂತೋಷ ದಿಂದ ನಾವು ಕೆಲಸ ಮಾಡುತ್ತಿದ್ದೇವೆ. ನಾನು, ಗೋಪಾಲಯ್ಯ ಸೇರಿದಂತೆ ಎಲ್ಲ ಸಚಿವರು ಯಡಿಯೂರಪ್ಪ ರಿಂದ ಕಲಿಯಬೇಕಾದದ್ದು ತುಂಬಾ ಇದೆ. ಅವರ ಕೈ ಕೆಳಗೆ ಇವತ್ತು ಸಹಕಾರಿ ಸಚಿವನಾಗಿ ಕೆಲಸ ಮಾಡೋದು ನನ್ನ ಪುಣ್ಯ ಎಂದು ಹಾಡಿ ಹೊಗಳಿದರು.  ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಡಾ.ಕೆ.ಗೋಪಾಲಯ್ಯ, ಬಿ.ಸಿ.ಪಾಟೀಲ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.