ನಿಗದಿಯಂತೆ ಜ.1ರಿಂದ ಶಾಲಾ-ಕಾಲೇಜುಗಳು ಪ್ರಾರಂಭ : ಸಿಎಂ ಬಿಎಸ್‍ವೈ ಸ್ಪಷ್ಟನೆ

ಬೆಂಗಳೂರು,ಡಿ.28- ಈಗಾಗಲೆ ನಿಗದಿಯಾಗಿರುವಂತೆ ಜನವರಿ 1ರಿಂದ ಶಾಲಾಕಾಲೇಜುಗಳು ಪ್ರಾರಂಭವಾಗಲಿದ್ದು, ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.  ಸಚಿವ ಸಂಪುಟ ಸಭೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾಕಾಲೇಜುಗಳನ್ನು ಜನವರಿ 1ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿವೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.  ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಶೇ.95ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಈ ಚುನಾವಣೆಗೆಕಾಂಗ್ರೆಸ್ ನ ಯಾವುದೇ ನಾಯಕರು ಆಸಕ್ತಿ ವಹಿಸಿರಲಿಲ್ಲ ಎಂದು ದೂರಿದರು.

ಅಧಿಕಾರ ವಿಕೇಂದ್ರೀಕರಣ ಸಂದರ್ಭದಲ್ಲಿ ಹಲವು ವಿದ್ಯಾವಂತರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮುಂದೆ ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗುವ ಸದಸ್ಯರಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ . ಗ್ರಾಮಗಳ ಅಭಿವೃದ್ಧಿ ಮಾಡಲು ಸದಸ್ಯರಿಗೆ ಸಹಕಾರ ಕೊಡಲು ಪ್ರಮಾಣಿಕ ಕೆಲಸ ಮಾಡುತ್ತೇವೆ ಎಂದು ಹೇಳಿದರು.