ಮುಂದುವರೆದ ಸಂಪುಟ ವಿಸ್ತರಣೆ ಅನಿಶ್ಚಿತತೆ

ಬೆಂಗಳೂರು,ಜ.8- ಇನ್ನೇನು ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಯ ಕಸರತ್ತು ಮತ್ತೆ ವೇಗ ಪಡೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಆ ಪ್ರಕ್ರಿಯೆ ಮತ್ತೆ ವಿಳಂಬವಾಗುವ ಸಾಧ್ಯತೆ ದಟ್ಟವಾಗುತ್ತಿದೆ.  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ, ಸಂಪುಟ ವಿಸ್ತರಣೆ ಎನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಶೀಘ್ರ ಆ ಕೆಲಸವನ್ನು ಸಿಎಂ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದರಿಂದ ಸಂಪುಟ ವಿಸ್ತರಣೆ ಸಂಕ್ರಾಂತಿಗೆ ಮುನ್ನವೇ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಅವರಂತೂ, ನಾನು ಸಚಿವನಾಗಬಹುದು ಎನ್ನುವ ಖಚಿತ ವಿಶ್ವಾಸದ ಮಾತನ್ನು ಹೇಳಿದ್ದರು.

ಸಿಎಂ ಬದಲಾಗಲಿದ್ದಾರೆ ಎನ್ನುವ ಸುದ್ದಿಯ ನಡುವೆ ಉಸ್ತುವಾರಿ ಅರುಣ್ ಸಿಂಗ್ ಅವರು ಯಡಿಯೂರಪ್ಪನವರೇ ಮುಂದಿನ ಎರಡೂವರೆ ವರ್ಷ ಸಿಎಂ. ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಆ ಮೂಲಕ, ಹೊಸ ಚೈತನ್ಯ ತುಂಬಿಕೊಂಡು ಯಡಿಯೂರಪ್ಪ, ಶೀಘ್ರವೇ ಸಂಪುಟ ವಿಸ್ತರಣೆಗೆ ಕೈಹಾಕಬಹುದು ಎಂಬ ನಿರೀಕ್ಷೆ ಸದ್ಯದ ಮಟ್ಟಿಗೆ ಹುಸಿಯಾದಂತಿದೆ.

ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ. ಹಿಂದೆ ಮಾತು ಕೊಟ್ಟಂತೆ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್ ಮತ್ತು ಮುನಿರತ್ನ ಜೊತೆಗೆ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಯಿದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿತ್ತು. ಆದರೆ, ಸಿಎಂ ಯಡಿಯೂರಪ್ಪನವರು ನೀಡಿದ ಹೇಳಿಕೆ ಆಕಾಂಕ್ಷಿಗಳಿಗೆ ತೀವ್ರ ನಿರಾಸೆ ತಂದಿದೆ.

ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಉಸ್ತುವಾರಿ ಹೇಳಿದ್ದರು. ಇದಕ್ಕೆ ವಿರುದ್ದವಾಗಿ ಹೇಳಿಕೆ ನೀಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಯ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆಕಾಂಕ್ಷಿಗಳು ಹೇಳಿಕೆ ಕೊಟ್ಟರೆ ನಾನ್ಯಾಕೆ ಭರವಸೆ ಕೊಡಬೇಕು. ಅಲ್ಲದೆ ವರಿಷ್ಠರು ಅನುಮತಿ ಕೊಟ್ಟರೆ ವಿಸ್ತರಣೆಯಾಗುತ್ತದೆ. ಸಹಜವಾಗಿ ಯಾರು ಮಂತ್ರಿ ಆಗಬೇಕೋ ಅವರು ಆಗುತ್ತಾರೆ ಎಂದಿದ್ದರು.

ಆ ಮೂಲಕ, ರಾಜ್ಯದ ಎಲ್ಲಾ ನಡೆಯ ಮೇಲೆ ವರಿಷ್ಠರ ಹಿಡಿತವಿದೆ, ಅವರ ಅನುಮತಿ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.  ಇನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ಮಾತನಾಡುತ್ತಾ, ಸಂಪುಟ ವಿಸ್ತರಣೆಯ ವಿಚಾರದಲ್ಲಿ ಯಾರಿಗೂ ಅವರಸರವಿಲ್ಲ.

ಹಿಂದಿನ ಮುಖ್ಯಮಂತ್ರಿಗಳು ಹದಿಮೂರು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಸಿಎಂ ಸಮಚಿತ್ತದಿಂದ, ಸಾಮಾಜಿಕ ನ್ಯಾಯದಡಿ, ಭೌಗೋಳಿಕ ನೆಲೆಯಲ್ಲಿ ಸಮಯ ಬಂದಾಗ ಮಾಡುತ್ತಾರೆ. ಹಾಗಾಗಿ, ಸದ್ಯದ ಮಟ್ಟಿಗೆ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದಕ್ಕೆ ಹೋಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.