ಖಾತೆ ಕ್ಯಾತೆ ಮುಗಿದ ಬಳಿಕ ಸಿಎಂ ಬಿಎಸ್‍ವೈಗೆ ಎದುರಾಯ್ತು ಮತ್ತೊಂದು ತಲೆನೋವು

Spread the love

ಬೆಂಗಳೂರು, ಜ.23- ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡಿರುವವರ ಬಿಕ್ಕಟ್ಟು, ಖಾತೆಗಳ ಮರುಹಂಚಿಕೆಯಿಂದ ಕುಪಿತಗೊಂಡಿರುವವರ ವಾತಾವರಣ ಇನ್ನೂ ಹಸಿಯಾಗಿರುವವಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೊಂದು ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಸಚಿವರು ತಮಗೆ ಇಂತಹದ್ದೇ ಜಿಲ್ಲೆಯ ಉಸ್ತುವಾರಿಯನ್ನಾಗಿ ನೀಡಬೇಕೆಂದು ಪಟ್ಟುಹಿಡಿದಿರುವುರಿಂದ ಆಡಳಿತಾರೂಢ ಬಿಜೆಪಿಯಲ್ಲಿ ದಿನಕ್ಕೊಂದು ಬಿಕ್ಕಟ್ಟು ಎದುರಾಗಿದೆ.

ಪ್ರಮುಖವಾಗಿ ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಾದ ಉಮೇಶ್‍ಕತ್ತಿ, ಎಂ.ಟಿ.ಬಿ.ನಾಗರಾಜ್, ಮುರಗೇಶ್‍ನಿರಾಣಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಮತ್ತಿತರರು ತಮ್ಮ ತವರು ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ನಂತರ ಸಂಪುಟದಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿರುವ ಬೆಳಗಾವಿ ಜಿಲ್ಲೆಗೆ ಭಾರೀ ಪೈಪೋಟಿ ಎದುರಾಗಿದೆ.

ಈಗಾಗಲೇ ಈ ಜಿಲ್ಲೆಗೆ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ತಾವು ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರಾಗಿದ್ದು, ತಮಗೆ ಬೆಳಗಾವಿ ಜಿಲ್ಲೆಯನ್ನೇ ಉಸ್ತುವಾರಿಯನ್ನಾಗಿ ನೇಮಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಇದರ ಜತೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕೂಡ ಅದೇ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ, ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ತಮಗೆ ಬೃಹತ್ ನೀರಾವರಿ ಖಾತೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲೇಬೇಕೆಂಬ ಷರತ್ತು ವಿಧಿಸಿದ್ದರು. ಹೀಗಾಗಿ ಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲಾ ಜವಾಬ್ದಾರಿಯನ್ನು ರಮೇಶ್ ಜಾರಕಿಹೊಳಿ ಅವರ ಹೆಗಲಿಗೆ ನೀಡಿದ್ದಾರೆ. ಈಗ ಉಮೇಶ್‍ಕತ್ತಿ ತಮಗೇ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ಹೊಸದೊಂದು ಬಿಕ್ಕಟ್ಟು ಸೃಷ್ಟಿಸಿದಂತಾಗಿದೆ.

ತಮಗೆ ನಿರೀಕ್ಷಿತ ಖಾತೆ ಕೊಡದಿದ್ದರೂ ಕಡೆ ಪಕ್ಷ ಹಾವೇರಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕೆಂದು ಪೌರಾಡಳಿತ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ಸಿಎಂಗೆ ಮನವಿ ಮಾಡಿದ್ದಾರೆ. ಈಗಾಗಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಜತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ತಮ್ಮನ್ನು ಹಾವೇರಿಗೆ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದಾರೆ.

ಯಡಿಯೂರಪ್ಪ ಆಪ್ತ ವಲಯದಲ್ಲಿ ಬಸವರಾಜು ಬೊಮ್ಮಾಯಿ ಗುರುತಿಸಿಕೊಂಡಿರುವುದರಿಂದ ಸದ್ಯ ಹಾವೇರಿ ಜಿಲ್ಲಾ ಉಸ್ತುವಾರಿ ಕೂಡ ಸಿಎಂಗೆ ಬಿಕ್ಕಟ್ಟು ಸೃಷ್ಟಿಸಿದೆ. ನಿನ್ನೆ ರಾತ್ರಿ ಶಂಕರ್ ಅವರನ್ನು ಕರೆದು ಸಿಎಂ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನನಗೆ ಕೇಳಿದ ಖಾತೆಯನ್ನೂ ಕೊಡಲಿಲ್ಲ. ಕಡೆ ಪಕ್ಷ ಹಾವೇರಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದ್ದಾರೆ.

ತಾವು ಕೇಳಿದ್ದ ಖಾತೆಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂ.ಟಿ.ಬಿ.ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಈಗಾಗಲೇ ಈ ಜಿಲ್ಲೆಗೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಹೊಸದಾಗಿ ಎಂ.ಟಿ.ಬಿ.ನಾಗರಾಜ್ ತಮಗೆ ಅದೇ ಜಿಲ್ಲೆ ಕೇಳಿರುವುದರಿಂದ ಯಡಿಯೂರಪ್ಪ ಅವರಿಗೆ ಇದೂ ಕೂಡ ತಲೆನೋವಾಗಿದೆ.

ಶಾಸಕರ ಭಾರೀ ವಿರೋಧದ ನಡುವೆಯೂ ಸಂಪುಟಕ್ಕೆ ಸೇರುವಲ್ಲಿ ಯಶಸ್ವಿಯಾಗಿದ್ದ ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ತವರು ಜಿಲ್ಲೆ ರಾಮನಗರ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಜಿಲ್ಲೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ನೇಮಕ ಮಾಡಲಾಗಿದೆ.  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರನ್ನು ಸಮರ್ಥವಾಗಿ ಎದುರಿಸಬೇಕಾದರೆ ರಾಮನಗರ ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬುದು ಯೋಗೇಶ್ವರ್ ಅವರ ಕೋರಿಕೆ. ಆದರೆ, ಅಶ್ವತ್ಥನಾರಾಯಣ ಅವರನ್ನು ಬದಲಾಯಿಸಿದರೆ ಮುನಿಸಿಕೊಳ್ಳಬಹುದೆಂಬ ಅಳುಕುಯಡಿಯೂರಪ್ಪ ಅವರನ್ನು ಕಾಡುತ್ತಿದೆ.

ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕೊಂಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕಲಬುರಗಿಗೆ ಸೀಮಿತಗೊಳಿಸಿ ತಮಗೆ ಬಾಗಲಕೋಟೆ ಜಿಲ್ಲೆ ಹೊಣೆಗಾರಿಕೆ ನೀಡಬೇಕೆಂದು ನೂತನ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಈಗಾಗಲೇ ಅವರಿಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ. ಒಂದು ಮೂಲದ ಪ್ರಾಕಾರ ನಿರಾಣಿಯವರು ಮುಖ್ಯಮಂತ್ರಿಯವರು ಕೊಟ್ಟಿರುವ ಖಾತೆಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ತಿಳಿದು ಬಂದಿದೆ.

ಹೀಗೆ ಹಲವು ಸಚಿವರು ತಮಗೆ ನಿರ್ಧಿಷ್ಟ ಜಿಲ್ಲೆಗಳ ಉಸ್ತುವಾರಿಯನ್ನೇ ನೀಡಬೇಕೆಂದು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕುತ್ತಿರುವುದರಿಂದ ಇದನ್ನು ಹೇಗೆ ಬಿ.ಎಸ್.ಯಡಿಯೂರಪ್ಪನವರ ಎದುರಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

Facebook Comments