ವಿರೋಧಿ ಬಣಕ್ಕೆ ಸೆಡ್ಡು ಹೊಡೆಯಲು ಸಿಎಂ ಮಾಸ್ಟರ್ ಪ್ಲಾನ್

ಬೆಂಗಳೂರು,ಜು.1-ತಮ್ಮ ನಾಯಕತ್ವದ ವಿರುದ್ಧ ಪಕ್ಷದೊಳಗಿನ ಒಂದು ಗುಂಪು ಪದೇ ಪದೇ ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ನಾಯಕತ್ವದ ವಿರುದ್ಧ ಎದ್ದಿರುವ ಗೊಂದಲಗಳಿಗೆ ತೆರೆ ಎಳೆದು 2023ರ ವಿಧಾನಸಭೆ ಚುನಾವಣೆವರೆಗೂ ತಾವೇ ಅಧಿಕಾರದಲ್ಲಿ ಮುಂದುವರೆಯುತ್ತೇನೆ ಎಂಬ ಸಂದೇಶವನ್ನು ವಿರೋಧಿ ಬಣಗಳಿಗೆ ನೀಡಲು ಸಜ್ಜಾಗಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸೋಂಕು ಇಳಿಮುಖವಾಗುತ್ತಿದ್ದು, ಇದು ಇನ್ನಷ್ಟು ಕಡಿಮೆಯಾಗುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಜಿಲ್ಲಾವಾರು ಪ್ರವಾಸಗಳನ್ನು ಕೈಗೊಳ್ಳಲು ಸಿಎಂ ಈಗಾಗಲೇ ನೀಲನಕ್ಷೆ ಸಿದ್ದಪಡಿಸಿದ್ದಾರೆ. ಪ್ರತಿ ದಿನ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಮಾಡಿರುವ ಸಾಧನೆಗಳು, ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಟ್ಟ ವಿಶೇಷ ಆರ್ಥಿಕ ಪ್ಯಾಕೇಜ್, ಕೋವಿಡ್ ನಿರ್ವಹಣೆ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಲಿದ್ದಾರೆ.

ಕಬಲಬುರ್ಗಿಯಿಂದ ಪ್ರವಾಸ ಆರಂಭವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಗಿದ ನಂತರ ಮುಂಬೈ ಕರ್ನಾಟಕ, ಮಧ್ಯಕರ್ನಾಟಕ, ಕರಾವಳಿ ಭಾಗ, ಹಳೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಚಿಂತನೆಯೂ ಇದೆ. ತಮ್ಮ ನಾಯಕತ್ವದ ವಿರುದ್ಧ ಕೆಲ ಸಚಿವರು ಮತ್ತು ಶಾಸಕರು ವರಿಷ್ಠರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪಕ್ಷ ಸಂಘಟನೆ ಹಾಗೂ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿ 2023ರ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಂಪರ್ಕ ಯಾತ್ರೆ ಕೈಗೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಈಗ ಇದೇ ಮಾದರಿಯಲ್ಲಿ ಯಡಿಯೂರಪ್ಪ ಕನಿಷ್ಠ ಒಂದು ತಿಂಗಳು 31 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ತಮ್ಮ ವರ್ಚಸನ್ನು ವೃದ್ಧಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಇದು ಸಂಪೂರ್ಣವಾಗಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಪ್ರವಾಸದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಪ್ರವಾಸದ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಒಂದು ಕಡೆ ಜನತೆ ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ಆರೋಪವೂ ಇದೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲ, ಪದೇ ಪದೇ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ, ನಾಯಕತ್ವದ ಗೊಂದಲ, ಸಮರ್ಪಕವಾಗಿ ಆರ್ಥಿಕ ಪ್ಯಾಕೇಜ್ ವಿತರಣೆ ಮಾಡದಿರುವ ಬಗ್ಗೆ ಜನತೆ ಆಕ್ರೋಶಗೊಂಡಿದ್ದಾರೆ ಎಂಬ ಆರೋಪವಿದೆ. ಇದನ್ನು ತೊಡೆದು ಹಾಕುವ ಕಾರಣಕ್ಕಾಗಿಯೇ ಬಿಎಸ್‍ವೈ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ, ತಮ್ಮಿಂದ ದೂರವಾಗಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.

ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು ಹಾಗೂ 2023ರಲ್ಲಿ ಪಕ್ಷದ ವತಿಯಿಂದ ಟಿಕೆಟ್ ಕಾತರಿಪಡಿಸುವುದು ಸೇರಿದಂತೆ ಭವಿಷ್ಯದ ಯೋಜನೆಗಳನ್ನು ಹಾಕಿಕೊಂಡೇ ಯಡಿಯೂರಪ್ಪ ಜಿಲ್ಲಾ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ.