ಬ್ಲೂ ಕಾಲರ್ ಉದ್ಯೋಗಗಳನ್ನು ಪರಿಗಣಿಸೋಣ : ಡಿಸಿಎಂ

ಬೆಂಗಳೂರು, ಜ.12- ವೈಟ್ ಕಾಲರ್ ಉದ್ಯೋಗಗಳ ಮೇಲಿನ ಅತಿಯಾದ ವ್ಯಾಮೋಹವನ್ನು ನಿಲ್ಲಿಸುವ ಅವಶ್ಯಕತೆ ಇದ್ದು, ನಾವು ಬ್ಲೂ ಕಾಲರ್ ಉದ್ಯೋಗಗಳನ್ನು ಪರಿಗಣಿಸಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಇಂದಿಲ್ಲಿ ತಿಳಿಸಿದರು. ಉನ್ನತ ಶೀಕ್ಷಣ ಇಲಾಖೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ, ಉಚಿತ ಲ್ಯಾಪ್‍ಟಾಪ್ ವಿತರಣೆ ಹಾಗೂ ಯುವ ಸಬಲೀಕರಣ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಗೆ ಸ್ಟಾರ್ಟ್‍ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಖೇಲೋ ಇಂಡಿಯಾ ದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ರಾಜ್ಯದ ಗ್ರಾಸ್ ಎನ್‍ರೋಲ್‍ಮೆಂಟ್ ರೇಶ್ಯೂ ಸುಧಾರಿಸಲು ಕೇಂದ್ರೀಕೃತ ಪ್ರಯತ್ನವನ್ನು ಕೈಗೊಳ್ಳುತ್ತಿದ್ದು, ಶೇ.30 ರಿಂದ 60ಕ್ಕೆ ಜಿಇಎಸ್ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸಿದ್ದೇವೆ. ಹಿಂದುಳಿದ ವರ್ಗಗಳ, ದೀನದಲಿತರ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಕಾರಿಯಾಗಲಿದೆ. ರಾಜ್ಯದ ಪ್ರತಿ ಜಿಲ್ಲೆಯ ಪ್ರತಿನಿಧಿ ಇರುವಂತಹ ಯೂತ್ ಕೌನ್ಸಿಲ್ ಸ್ಥಾಪಿಸಲಾಗುವುದು ಎಂದರು.

ಸಂವಿಧಾನದಲ್ಲಿ ಬಹುಸಂಖ್ಯಾತರಿಗಿಂತ ಅಲ್ಪಸಂಖ್ಯಾತರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲಾಗಿರುವ ರಾಷ್ಟ್ರ ನಮ್ಮದು. ರಾಜಕೀಯ ಕಾರಣಗಳಿಗಾಗಿ ಬಹುಸಂಖ್ಯಾತ, ಅಲ್ಪಸಂಖ್ಯಾತರ ನಡುವೆ ಅಡೆತಡೆಗಳನ್ನು ತರಲು ನಡೆಯುತ್ತಿರುವ ಪ್ರಯತ್ನಗಳು ಖಂಡನೀಯ. ಇಂತಹ ವಿಚಾರಗಳು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ವಿರುದ್ಧವಾದವು ಎಂದು ಹೇಳಿದರು.

ರಾಜ್ಯಕ್ಕೆ ಯಾವುದು ಒಳ್ಳೆಯದು ಎಂಬ ವಿವೇಚನೆಯನ್ನು ಬೆಳೆಸಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಏಕಭಾರತ್ ಶ್ರೇಷ್ಠ ಭಾರತ್ ಅನ್ನು ನನಸು ಮಾಡಲು ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ನಿಮಗೆ ನೀವೇ ಮಿತ್ರರು, ನಿಮಗೇ ನೀವೇ ಗುರುಗಳು ಕೂಡ ಆಗಿದ್ದು, ಎಷ್ಟೇ ಕಷ್ಟ ಬಂದರೂ ಎದುರಿಸುವ ಧೈರ್ಯ, ತಾಳ್ಮೆಯನ್ನು ರೂಢಿಸಿಕೊಂಡು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು. ದೃಢ ಮನಸ್ಸಿನಿಂದ ಪಟ್ಟು ಬಿಡದೆ ಮುನ್ನುಗ್ಗಿ ಗುರಿ ತಲುಪಬೇಕು ಎಂದು ಕರೆ ನೀಡಿದರು.