ಬೆಂಗಳೂರು,ಫೆ.15- ಸಹಕಾರ ಇಲಾಖೆಯಲ್ಲಿ ಖಾಸಗಿ ಲೆಕ್ಕ ಪರಿಶೋಧಕರಿಂದಾಗಿ ಕೆಲ ಅವ್ಯವಹಾರಗಳಾಗುತ್ತಿದ್ದು, ಅದಕ್ಕೆ ನಿಯಂತ್ರಣ ತರಲು ಮುಂದಿನ ಅಧಿವೇಶನದ ವೇಳೆಗೆ ಕಠಿಣ ನಿಯಮಾವಳಿಗಳನ್ನೊಳಗೊಂಡ ಹೊಸ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಅಧಿಕಾರಿಗಳ ಕೊರತೆ ಇದೆ. ಅದಕ್ಕಾಗಿ 402 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್‍ನಿಂದಾಗಿ ಯಾವುದೇ ನೇಮಕಾತಿಗೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ಭರವಸೆ ಇದೆ ಎಂದರು.
ಸಹಕಾರ ಇಲಾಖೆಯಲ್ಲಿ 1700 ಲೆಕ್ಕ ಪರಿಶೋಧಕರು ನೋಂದಾಯಿಸಿಕೊಂಡಿದ್ದಾರೆ. ಒಬ್ಬರು 250ರಿಂದ 300 ಲೆಕ್ಕ ಪರಿಶೋಧನೆ ಮಾಡುತ್ತಿದ್ದರು. ಸಹಾಯಕರ ಮೂಲಕ ಕೆಲಸ ಮಾಡುತ್ತಿದ್ದರಿಂದಾಗಿ ಗುಣಮಟ್ಟದ ಕೊರತೆ ಉಂಟಾಗಿತ್ತು. ಮರುಲೆಕ್ಕಪರಿಶೋಧನೆ ಮಾಡಿಸಿದಾಗ ದೋಷ ಇರುವುದು ಕಂಡುಬಂದಿದೆ.
ಮುಂದಿನ ದಿನಗಳಲ್ಲಿ ರ್ನಿಷ್ಟ ಲೆಕ್ಕ ಪರಿಶೋಧನೆಗೆ ಸೀಮಿತಗೊಳಿಸುವುದು ಸೇರಿದಂತೆ ಹಲವಾರು ಮಾರ್ಗಸೂಚಿಗಳ ಮಸೂದೆಯನ್ನು ವಿಧಾನಮಂಡಲದಲ್ಲಿ ಂಡಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ 39,570 ಸಹಕಾರ ಸಂಘಗಳು, 3,64,233 ಸಂಘ ಸಂಸ್ಥೆಗಳು, 6,059 ಕ್ಲಬ್‍ಗಳು, 5,160 ಸೌಹಾರ್ದ ಸಂಘಗಳು, 5045 ಲೇವಾದೇವಿದಾರರು, 8,635 ಹಣಕಾಸು ಸಂಸ್ಥೆಗಳು, 7,851 ಗಿರವಿದಾರರು, 980 ಚೀಟಿನಿ ಸಂಸ್ಥೆಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.
ಗುರು ರಾಘವೇಂದ್ರ ಬ್ಯಾಂಕ್ ಸಂತ್ರಸ್ತರಿಗೆ ನೆರವು:
ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2014-15ರಿಂದ 2018-19ರವರೆಗೆ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ ಮರು ಲೆಕ್ಕಪರಿಶೋಧನೆ ನಡೆಸಿದಾಗ 1792 ಕೋಟಿ ರೂ. ನಷ್ಟವಾಗಿರುವುದು ಕಂಡುಬಂದಿದೆ.
2019ರಿಂದ ಈವರೆಗೂ ಮತ್ತಷ್ಟು ಲೆಕ್ಕ ಪರಿಶೋಧನೆಗಳಾಗಬೇಕು. ಅವ್ಯವಹಾರ ಎಸಗಿದ 19 ಸಿಬ್ಬಂದಿಗಳ ವಿರುದ್ದ ಕ್ರಮ ಜರುಗಿಸಲಾಗಿದೆ. 15 ಮಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಬ್ಯಾಂಕ್‍ನ ಆಡಳಿತ ಮಂಡಳಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಒಟ್ಟು 9057 ಸದಸ್ಯರಿದ್ದು, ಅದರಲ್ಲಿ 6719 ಮಂದಿ ಠೇವಣಿ ಇಟ್ಟಿದ್ದಾರೆ.
ಹೂಡಿಕೆ ಮಾಡಿದ ಒಟ್ಟು 41778 ಮಂದಿಗೆ ವಂಚನೆಯಾಗಿದೆ. ವಿಮಾ ಮೂಲಕ 709 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. 42,597 ಠೇವಣಿದಾರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಒಂದು ಲಕ್ಷದವರೆಗೆ ಮಿತಿಗೊಳಿಸಿ 233 ಕೋಟಿ ರೂ. ಪಾವತಿಸಲಾಗಿದೆ.
ಬ್ಯಾಂಕ್ ಪುನಶ್ಚೇತನಕ್ಕೆ ಕಾಲಕಾಲಕ್ಕೆ ಸಭೆಗಳನ್ನು ಮಾಡಲಾಗುತ್ತಿದೆ. ನ್ಯಾಯಾಲಯವೇ ನೇರ ಉಸ್ತುವಾರಿಯಲ್ಲಿ ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಸರ್ಕಾರದ ಮತ್ತೊಂದು ಉನ್ನತ ಅಧಿಕಾರಿಗಳ ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಶ್ರೀ ವಸಿಷ್ಠ ಕ್ರೆಡಿಟ್ ಸೌಹರ್ದಾ ಸಹಕಾರ ಸಂಘದಲ್ಲೂ ಅವ್ಯವಹಾರ ನಡೆದಿದ್ದು, ಅದರ ವಿರುದ್ದ ಕೂಡ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
