ಸಹಕಾರ ಸಂಘಗಳ ಬಗ್ಗೆ ಅಪಪ್ರಚಾರ ಮಾಡಬೇಡಿ : ಜಿ.ಟಿ.ದೇವೇಗೌಡ

Social Share

ಬೆಂಗಳೂರು,ಫೆ.26- ರಾಷ್ಟ್ರದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಸಹಕಾರ ಚಳವಳಿಯ ಬಗ್ಗೆ ಅಪಪ್ರಚಾರ ಸಲ್ಲದು. ರಾಷ್ಟ್ರದ ಅರ್ಥ ವ್ಯವಸ್ಥೆಗೆ ಪೋಷಕವಾಗಿರುವ ಸಹಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡಬಾರದು ಮಾಜಿ ಸಚಿವ ಜಿ.ಟಿ. ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಸಹಕಾರಿ ಚಳವಳಿ ಆರ್ಥಿಕ ವ್ಯವಸ್ಥೆಯ ಆಶ್ರಯದ ಬಂಡೆಯಂತಿದೆ. ಸಮತಾವಾದ, ಬಂಡವಾಳಶಾಹಿ ನಡುವಿನ ಸುವರ್ಣ ಮಾಧ್ಯಮ ಎನಿಸಿ ಕೊಂಡಿದೆ. ಕೃಷಿ ಕ್ರಾಂತಿ, ಶ್ವೇತ ಕ್ರಾಂತಿಯ ಶಿಲ್ಪಿ ಆಗಿದೆ. ಅಮೂಲ್, ಇಪ್ರೋ, ಕ್ರಿಬ್ಕೋ ಸಂಸ್ಥೆಗಳು ವಿಶ್ವ ಮನ್ನಣೆ ಗಳಿಸಲು ಕಾರಣವೆನಿಸಿದೆ. ಅಪಪ್ರಚಾರದ ಪ್ರಭಾವ ಎಷ್ಟೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಸಹಕಾರ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿರುವುದನ್ನು, ಹಾಗೆಯೇ ಜನತೆ ಜಾಗೃತರಾಗುತ್ತಿರುವುದನ್ನು ಕಾಣಬಹುದಾಗಿದೆ.
ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಹಕಾರ ಕ್ಷೇತ್ರದ ಬೆಳವಣಿಗೆ, ಸಾಧನೆ ಬಗ್ಗೆ ಹೊಟ್ಟೆಕಿಚ್ಚಿನಿಂದ ತಪ್ಪು ಮಾಹಿತಿಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸಿ, ಜನಸಮುದಾಯ ಸಹಕಾರಿ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡುವ ಪ್ರಯತ್ನ ರಾಷ್ಟ್ರದ ದೃಷ್ಟಿಯಿಂದ, ಸಮಾಜದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಹಕಾರ ಚಳವಳಿ ವಿಶ್ವಮಾನ್ಯತೆ ಗಳಿಸಿದೆ. ಭಾರತದಲ್ಲಿ ಬೃಹತ್ ಸಹಕಾರಿ ವ್ಯವಸ್ಥೆಯ ಜಾಲವಿದೆ. 8 ಲಕ್ಷ ಸಹಕಾರ ಸಂಸ್ಥೆಗಳು 30 ಕೋಟಿ ಸದಸ್ಯರು ಇದ್ದು ರಾಷ್ಟ್ರದ ಅರ್ಥ ವ್ಯವಸ್ಥೆಗೆ ಪೋಷಕವಾಗಿದೆ. ಕರ್ನಾಟಕದಲ್ಲಿ 45 ಸಾವಿರ ಸಹಕಾರ ಸಂಘಗಳಿದ್ದು, 2 ಕೋಟಿ 45 ಲಕ್ಷ ಸದಸ್ಯರಿದ್ದಾರೆ.
ಅಮೇರಿಕಾ ಸೇರಿದಂತೆ ವಿಶ್ವದ ಅರ್ಥ ವ್ಯವಸ್ಥೆ ಕುಸಿದಾಗ, ಬ್ಯಾಂಕುಗಳು ದಿವಾಳಿ ಹಂತ ತಲುಪಿದಾಗ ಭಾರತದ ಸಹಕಾರಿ ಬ್ಯಾಂಕುಗಳು ಅಂಜದೆ, ಅಳುಕದೆ ದಿಟ್ಟತನದಿಂದ ಪ್ರಗತಿಯತ್ತ ಸಾಗಿದುದು ವಿಶ್ವದ ಅರ್ಥತಜ್ಞರ ಮೆಚ್ಚುಗೆಗೆ ಪಾತ್ರವಾಯಿತು.
ಭಾರತದಲ್ಲಿ 1500ಕ್ಕೂ ಹೆಚ್ಚು, ಕರ್ನಾಟಕದಲ್ಲಿ 260ಕ್ಕೂ ಹೆಚ್ಚು ಪಟ್ಟಣ ಸಹಕಾರಿ ಬ್ಯಾಂಕುಗಳಿವೆ. ಲಕ್ಷಾಂತರ ಕೋಟಿ ರೂ. ಠೇವಣಿಗಳಿವೆ, ಲಕ್ಷಾಂತರ ಕೋಟಿ ರೂ. ಸಾಲ ವಿತರಣೆಯಾಗುತ್ತಿದೆ. ಅಂತ ಸಂದರ್ಭದಲ್ಲಿ ಅಲ್ಲೊಂದು, ಇಲ್ಲೊಂದು ಬ್ಯಾಂಕಿನಲ್ಲಿ ಆಗಬಹುದಾದ ಲೋಪವನ್ನು ಸಾರ್ವತ್ರೀಕರಣಗೊಳಿಸಲಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಾರ್ಯನಿರತವಾಗಿರುವ 37532 ಸಹಕಾರ ಸಂಘಗಳಲ್ಲಿ 2460 ಸಂಘಗಳು ನಿಷ್ಕ್ರಿಯವಾಗಿವೆ ಎಂದರೆ ಅದು ಹಲವು ದಶಕಗಳ ಕಾಲದ ಕೂಡಿಬಂದಿರುವ ಪ್ರಕ್ರಿಯೆ ಹಾಗೂ 50 ವಿಭಾಗಗಳಲ್ಲಿ ಕ್ರೋಢೀಕೃತವಾದ ಸಂಖ್ಯೆಯಾಗಿದೆ. ಗಾಬರಿಯಾಗುವಂತಹುದಲ್ಲ. ಒಂದೆರಡು ಬ್ಯಾಂಕುಗಳು ಮಾಡಿರಬಹುದಾದ ತಪ್ಪುಗಳ ತನಿಖೆ ನಡೆಯುತ್ತಿದ್ದು, ಯಾವ ಠೇವಣಿದಾರರೂ ಆತಂಕಪಡಬೇಕಾದ ಅಗತ್ಯವಿಲ್ಲವೆಂಬ ಭರವಸೆ ಇದೆ.
ನಮ್ಮ ರಾಜ್ಯದ ಸಹಕಾರ ಸಂಘಗಳಲ್ಲಿನ ಠೇವಣಿ ಮೊತ್ತ, ಲಾಭ ಗಳಿಸುತ್ತಿರುವ ಸಂಘಗಳ ಸಂಖ್ಯೆ, ಸದಸ್ಯರ ಸಂಖ್ಯೆಗಳು ವ್ಯವಸ್ಥೆಯ ಭದ್ರತೆಗೆ ಸಾಕ್ಷಿ ಎನಿಸಿವೆ. ಸಹಕಾರ ಸಂಘಗಳಲ್ಲಿನ ಲೋಪಕ್ಕೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಸಹಕಾರಿ ಕಾನೂನು ತಿದ್ದುಪಡಿಗೆ ಪ್ರಯತ್ನಗಳು ನಡೆದಿವೆ.
ಸಹಕಾರ ಸಂಘಗಳು ತಮ್ಮ ನೋಂದಣಿಯನ್ನು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಹೀಗಾಗಿ ನಮ್ಮ ರಾಜ್ಯದ ಸಹಕಾರ ಸಂಘಗಳು, ಸಹಕಾರಿ ವ್ಯವಸ್ಥೆ ಕೆಲವೇ ಕೆಲವು ದೌರ್ಬಲ್ಯಗಳ ನಡುವೆಯೂ ಸಶಕ್ತವಾಗಿದ್ದು ಯಾರೂ ಯಾವುದೇ ಸಂದರ್ಭದಲ್ಲೂ ಕಳವಳಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

Articles You Might Like

Share This Article