ಡೆಹ್ರಾಡೂನ್,ಜ.23- ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಜನರಲ್ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ (ನಿವೃತ್ತ) ವಿಜಯ್‍ರಾವತ್ ಅವರು ಮುಂಬರುವ ಉತ್ತರಖಾಂಡ್ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಇಂದು ತಿಳಿಸಿದ್ದಾರೆ.
ಪಕ್ಷದ ನಾಯಕರು ನನ್ನನ್ನು ಸ್ಪರ್ಧೆಗಿಳಿಯುವಂತೆ ಸೂಚಿಸಿದರು. ಆದರೆ, ನಾನು ಅದಕ್ಕೆ ಇಲ್ಲ ಎಂದು ಹೇಳಿದೆ ಎಂಬುದಾಗಿ ಕರ್ನಲ್ ರಾವತ್ ಪ್ರತಿಪಾದಿಸಿದ್ದಾರೆ.
ಹಿರಿಯ ಧುರೀಣರು ಸ್ರ್ಪಸಲೇಬೇಕು ಎಂದು ಒತ್ತಾಯ ಹೇರಿದರೆ ಏನು ಮಾಡುವಿರಿ ಎಂದು ಕೇಳಿದಾಗ ನಾನು ವಿನಯಪೂರ್ವಕವಾಗಿ ನಿರಾಕರಿಸುವ ಶೇ.99ರಷ್ಟು ಸಾಧ್ಯತೆಗಳಿವೆ ಎಂದು ರಾವತ್ ಹೇಳಿದರು. ನನಗೆ ಚುನಾವಣೆಗಳ ಸ್ಪರ್ಧೆಗಿಂತ ಉತ್ತರಾಖಂಡ್‍ನ ಜನತೆಗೆ ಸೇವೆ ಸಲ್ಲಿಸುವುದೇ ಪ್ರಥಮಾಧ್ಯತೆಯಾಗಿದೆ ಎಂದು ರಾವತ್ ನುಡಿದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಒಂದು ತಿಂಗಳಿರುವಾಗ ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ಕರ್ನಲ್ ರಾವತ್ ಅವರಿಗೆ ಪಕ್ಷವು ಚುನಾವಣಾ ಟಿಕೆಟ್ ನೀಡಲಿದೆ ಎಂದು ಮಾಧ್ಯಮಗಳಲ್ಲಿ ಊಹಾಪೋಹಗಳು ಸೃಷ್ಟಿಯಾಗಿದ್ದವು.
