ಶೀತಗಾಳಿಯಿಂದ ನಡುಗುತ್ತಿದೆ ದೆಹಲಿ

ನವದೆಹಲಿ, ಡಿ.19- ಉತ್ತರ ಭಾರತದಾದ್ಯಂತ ಚಳಿಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ರಾಜಧಾನಿ ದೆಹಲಿಯಲ್ಲಿ ಶೀತ ತರಂಗದ ತೀವ್ರತೆ ಹೆಚ್ಚಾಗಿ ತಾಪಮಾನ 3.6 ಡಿಗ್ರಿ ಸೆಲ್ಸಿಯಿಸ್‍ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಸೋಮವಾರ 5.6 ಡಿಗ್ರಿ ಸೆಲ್ಸಿಯಸ್ ಇದ್ದ ಚಳಿಗಾಳಿ ಇಂದು ಮುಂಜಾನೆ 3.6 ಡಿಗ್ರಿಗೆ ಇಳಿದು ನಗರಾದ್ಯಂತ ಶೀತ ತರಂಗಗಳು ಬೀಸುತ್ತಿರುವುದು ಸಫ್ದರ್‍ಜಂಗ್ ಅಬ್ಸರ್ವೆಟರಿಯಲ್ಲಿ ದಾಖಲಾಗಿದೆ.

ರಾಜಧಾನಿಯ ಇತರ ಬಡಾವಣೆಗಳಾದ ಅಯನಗರ ಮತ್ತು ಲೋಧಿಯಲ್ಲಿ ಹವಾಮಾನವು 2.6 ಡಿಗ್ರಿ ಸೆಲ್ಸಿಯಸ್ ಹಾಗೂ 2.7 ಡಿಗ್ರಿ ಸೆಲ್ಸಿಯಸ್‍ಗೆ ಇಳಿದು ಶೀತಗಾಳಿ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಹೊಸ ವರ್ಷದ ಆರಂಭದ ಹಿಂದಿನ ದಿನ ಶೀತ ತರಂಗಗಳು ಜಾಸ್ತಿಯಾಗುವ ಸಾಧ್ಯತೆಯೂ ಇದೆ.

ಪಶ್ಚಿಮ ಭಾಗದಲ್ಲಿ ಉಂಟಾದ ಹವಾಮಾನ ವೈಪರೀತ್ಯ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಕಾಂಡದಲ್ಲಿ ಹರಡಿರುವ ಹಿಮಪಾತದಿಂದ ಉತ್ತರ ಭಾರತದಲ್ಲಿ ಶೀತಗಾಳಿ ಹೆಚ್ಚಾಗಿದೆ ಎಂದು ಐಎಂಡಿ ವರದಿ ಪ್ರಕಟಿಸಿದೆ. ಕಳಪೆ ವಾಯು ಗುಣಮಟ್ಟದಿಂದ ಬಳಲುತ್ತಿರುವ ಜನತೆಗೆ ಈಗ ವಾತಾವರಣದ ಬದಲಾವಣೆ ಮತ್ತಷ್ಟು ತೊಂದರೆಗೀಡು ಮಾಡಿದೆ.