ಬಗೆಹರಿಯದ ಹಿಜಾಬ್ ವಿವಾದ, ಮತ್ತಷ್ಟು ದಿನ ಶಾಲಾ-ಕಾಲೇಜು ಬಂದ್..!

Social Share

ಬೆಂಗಳೂರು,ಫೆ.10- ರಾಜ್ಯದಲ್ಲಿ ಪರಿಸ್ಥಿತಿ ಇನ್ನು ಬೂದಿ ಮುಚ್ಚಿದ ಕೆಂಡದಂತೆ ಇರುವ ಕಾರಣ ಈಗಾಗಲೇ ಶಾಲಾಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಮೂರು ದಿನ ರಜೆ ಘೋಷಣೆ ಮಾಡಿತ್ತು. ನಾಳೆ ಈ ಅವಧಿ ಮುಗಿಯಲಿದ್ದು, ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಲು ಸರ್ಕಾರ ಒಲವು ತೋರಿದೆ.
ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇಲಾಖೆ ಅಕಾರಿಗಳು, ಡಿಸಿ, ಎಸ್‍ಪಿ, ಡಿಡಿಪಿಐ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಶಾಲಾಕಾಲೇಜುಗಳಿಗೆ ನೀಡಿರುವ ರಜೆಯನ್ನು ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಬೇಕೋ ಇಲ್ಲವೇ ಶನಿವಾರದಿಂದಲೇ ಪುನರಾರಂಭಿಸಬೇಕೋ ಎಂಬುದರ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಬಂದಿದ್ದರೂ ರಾಜ್ಯದ ಬಹುತೇಕ ಕಡೆ ಬೂದಿ ಮುಚ್ಚಿದ ಕೆಂಡದಂತಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 144 ಸೆಕ್ಷನ್ ವಿಧಿಸಿರುವುದು ಹಾಗೂ ರಜಾ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳಾಗಲಿ, ಸಂಘಟನೆಗಳು, ಶಾಲಾಕಾಲೇಜುಗಳತ್ತ ಸುಳಿದಿಲ್ಲ.
ಶನಿವಾರ ಪುನಃ ಶಾಲಾಕಾಲೇಜುಗಳು ಪುನರಾರಂಭವಾದರೆ ಮತ್ತೆ ವಿದ್ಯಾರ್ಥಿಗಳ ನಡುವೆ ವಾದ-ವಿವಾದ ನಡೆದು ಕೋಮು ಸಂಘರ್ಷ ಉಂಟಾಗಬಹುದೆಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ.
ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೇ ಬರುತ್ತೇವೆ ಎಂದು ಹೇಳುತ್ತಿದ್ದರೆ, ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ನಾವು ಕೂಡ ಕೇಸರಿ ಶಾಲು ಹಾಕಿಕೊಂಡೇ ಬರುತ್ತೇವೆ ಎಂದು ಸೆಡ್ಡು ಹೊಡೆದಿದ್ದಾರೆ. ರಾಜ್ಯದ 18 ಜಿಲ್ಲೆಗಳ 55 ಕಾಲೇಜುಗಳಲ್ಲಿ ಕೋಮು ಸಂಘರ್ಷ ಉಂಟಾಗಿದ್ದು ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ನಡುವೆ ಮಾರಾಮಾರಿ ಮಾತಿನ ಚಕಮಕಿ, ಕಲ್ಲು ತೂರಾಟ ನಡೆದಿದೆ.
ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ಮತ್ತಿತರ ಕಡೆ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ನಡುವೆ ಮಾರಾಮಾರಿ ನಡೆದುದ್ದರಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಲಘು ಲಾಠಿ ಚಾರ್ಜ್ ಮಾಡಿಸಿದ್ದರು.  ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಹೈಕೋರ್ಟ್‍ನ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆದು ಅಂತಿಮ ತೀರ್ಪು ಬರುವವರೆಗೂ ಮೂರ್ನಾಲ್ಕು ದಿನ ರಜೆಯನ್ನು ವಿಸ್ತರಣೆ ಮಾಡುವ ಸಂಭವವಿದೆ. ಅಂತಿಮವಾಗಿ ಸಂಜೆ ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಶಾಲಾಕಾಲೇಜುಗಳಿಗೆ ನೀಡಿರುವ ರಜೆ ವಿಸ್ತರಣೆಯ ಭವಿಷ್ಯ ತೀರ್ಮಾನವಾಗಲಿದೆ.

Articles You Might Like

Share This Article