ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳ ಡಿಕ್ಕಿ, 13 ಮಂದಿ ಸಾವು..!

ಲಾಹೋರ್, ಜು.11-ಪ್ರಯಾಣಿಕರ ರೈಲು ಮತ್ತು ಸರಕು ಸಾಗಣೆ ರೈಲು ನಡುವೆ ಡಿಕ್ಕಿಯಾಗಿ 13 ಮಂದಿ ಮೃತಪಟ್ಟು , 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಕ್ವೆಟ್ಟಾ ಪ್ರಾಂತ್ಯಕ್ಕೆ ತೆರಳುತ್ತಿದ್ದ ಅಕ್ಬರ್ ಎಕ್ಸ್‍ಪ್ರೆಸ್ ರೈಲು ಪಂಜಾಬ್ ಪ್ರಾಂತ್ಯದ ಸಾದಿಖಾಬಾದ್ ತಹಸೀಲ್‍ನ ವಲ್ಹರ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿತು ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

ಲೂಪ್ ಲೈನ್‍ನಲ್ಲಿ ಗೂಡ್ಸ್ ರೈಲು ನಿಂತಿತ್ತು. ವೇಗವಾಗಿ ಬರುತ್ತಿದ್ದ ಪ್ರಯಾಣಿಕರ ರೈಲು ಮುಖ್ಯ ಮಾರ್ಗದ ಮೇಲೆ ಚಲಿಸುವ ಬದಲಿಗೆ ದೋಷಪೂರಿತವಾಗಿ ಬೇರೊಂದು ಟ್ರ್ಯಾಕ್‍ಗೆ ಮೇಲೆ ನುಗ್ಗಿದ್ದರಿಂದ ಈ ದುರಂತ ಸಂಭವಿಸಿತು.

ಈ ಘಟನೆಯಲ್ಲಿ 13 ಮಂದಿ ಮೃತಪಟ್ಟು, ಇತರ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದುನಿಯಾ ನ್ಯೂಸ್ ವರದಿ ತಿಳಿಸಿದೆ. ಅಪಘಾತದ ತೀವ್ರತೆಗೆ ಅಕ್ಬರ್ ಎಕ್ಸ್‍ಪ್ರೆಸ್‍ನ ಎಂಜಿನ್ ಸಂಫೂರ್ಣ ನಾಶವಾಗಿದ್ದು, ಮೂರು ಬೋಗಿಗಳು ನಜ್ಜುಗುಜ್ಜಾಗಿವೆ.  ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

Sri Raghav

Admin