ಬೆಂಗಳೂರಲ್ಲಿ ಖೋಟಾನೋಟು ದಂಧೆ ಬಯಲಿಗೆ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..!

ಬೆಂಗಳೂರು, ಅ.26- ಅಮಾನೀಕರಣಗೊಂಡ 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಬದಲಾವಣೆ ಮಾಡುತ್ತಿದ್ದ 5 ಮಂದಿ ಖೋಟಾನೋಟು ದಂಧೆಕೋರರನ್ನು ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 80 ಲಕ್ಷ ಅಮಾನೀಕರಣಗೊಂಡಿ ರುವ ನೋಟುಗಳು ಹಾಗೂ 5 ಕೋಟಿಯಷ್ಟು ಕಲರ್ ಜೆರಾಕ್ಸ್ ಮಾಡಿರುವ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಚ್‍ಬಿಆರ್ ಲೇಔಟ್, ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಮೂವರು ಆರೋಪಿಗಳು ಅಮಾನೀಕರಣಗೊಂಡ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಗೋವಿಂದಪುರ ಠಾಣೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಹೋಗಿ ಖಚಿತ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಒಬ್ಬ ವ್ಯಕ್ತಿಯ ಬಳಿ ಇದ್ದ ಕಪ್ಪು ಬಣ್ಣದ ಬ್ಯಾಗ್‍ನಲ್ಲಿರುವ ವಸ್ತುವಿನ ಬಗ್ಗೆ ವಿಚಾರಿಸಿದಾಗ ಬ್ಯಾಗ್‍ನಲ್ಲಿ ಹಳೆಯ ನೋಟುಗಳಿದ್ದು, ಅವುಗಳನ್ನು ಬದಲಾಯಿಸಲು ಬಂದಿರುತ್ತೇವೆ ಹಾಗೂ ನಮಗೆ ಪರಿಚಯವಿರುವ ವ್ಯಕ್ತಿಗಳು ಹಳೆ ನೋಟುಗಳನ್ನು ತಂದುಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಅಮಾನೀಕರಣಗೊಂಡ ಹಳೆಯ 1000 ಮತ್ತು 500ರೂ. ಮುಖಬೆಲೆಯ ಒಟ್ಟು 45 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರುಗಳ ಪತ್ತೆಗೆ ವಿಶೇಷ ತಂಡ ರಚಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಅಮಾನೀಕರಣಗೊಂಡಿರುವ 500ರೂ. ಮುಖಬೆಲೆಯ 35 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕೂಲಂಕಶವಾಗಿ ವಿಚಾರಣೆ ನಡೆಸಿದ ಪೊಲೀಸರು, ಇದೇ ರೀತಿ ಕೋಟ್ಯಂತರ ರೂ. ಮೌಲ್ಯದ ಅಮಾನೀಕರಣಗೊಳಿಸಿರುವ ಹಣ ಕೇರಳ ರಾಜ್ಯದ ಕಾಸರಗೋಡಿನಲ್ಲಿದ್ದು, ಹಣವನ್ನು ತೋರಿಸುವುದಾಗಿ ಹೇಳಿದ್ದಾರೆ.

ಈ ಆಧಾರದ ಮೇಲೆ ತನಿಖಾ ತಂಡವು ಕೇರಳ ರಾಜ್ಯದ ಬೇನೂರು-ಕುಂದಡುಕ್ಕಂ ರಸ್ತೆಯಲ್ಲಿರುವ ಫಾರ್ಮ್‍ಹೌಸ್‍ಗೆ ತೆರಳಿ ಪರಿಶೀಲಿಸಿದಾಗ 500 ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂಟೆಗಳಲ್ಲಿ ತುಂಬಿಸಿ ಜೋಡಿಸಿಟ್ಟಿರುವುದು ಕಂಡುಬಂದಿದೆ.  ಕೆಲವೊಂದು ನೋಟುಗಳನ್ನು ಥರ್ಮಾಕೋಲ್ ಮೇಲೆ ಅಂಟಿಸಿ ಬಂಡಲ್ ರೀತಿಯಲ್ಲಿ ಮಾಡಿರುವುದು ಕಂಡುಬಂದಿದೆ. ಒಟ್ಟು 12 ಥರ್ಮಾಕೋಲ್‍ಗಳು ಹಾಗೂ 24 ಮೂಟೆಗಳಲ್ಲಿ ತುಂಬಿದ್ದ ಕಲರ್ ಜೆರಾಕ್ಸ್ ಮಾಡಿದ್ದ 5 ಕೋಟಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ. ಆರೋಪಿಗಳ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.