ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ : ಹಾಸ್ಯನಟ ಉಮೇಶ್
ಬೆಂಗಳೂರು, ಆ.13- ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಉಮೇಶ್ ಅನ್ನೋ ಹೆಸರು ಕೊಟ್ಟು 63 ವರ್ಷ ನನಗೆ ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ ಎಂದು ಹಿರಿಯ ಹಾಸ್ಯ ನಟ ಉಮೇಶ್ ತಿಳಿಸಿದರು.
ಉಮೇಶ್ ಅವರು ಚಿತ್ರರಂಗಕ್ಕೆ ಬಂದು 63 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಇದು ಸುದಿನ, ವಾಣಿಜ್ಯ ಮಂಡಳಿ ಕರೆದು ನನಗೆ ಸನ್ಮಾನ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ ಎಂದರು.
ನಿರ್ದೇಶಕ ಪುಟ್ಟಣ್ಣ ಅವರು ಮಕ್ಕಳ ರಾಜ್ಯದ ಮೂಲಕ ನಾಯಕನನ್ನಾಗಿ ಮಾಡಿ ನಾನು 63 ವರ್ಷ ಕಲಾ ಸೇವೆ ಮಾಡಲು ಕಾರಣರಾದರು. ಇಲ್ಲಿವರೆಗೂ ಮೂರು ತಲೆಮಾರುಗಳ ನಿರ್ದೇಶಕ, ನಿರ್ಮಾಪಕ ಮತ್ತು ನಟರ ಜೊತೆ ಕೆಲಸ ಮಾಡಿದ್ದೇನೆ.
ಆಗ ಕೆಲವರು ಸಂಭಾವನೆ ಕೊಡುತ್ತಿದ್ದರು, ಇನ್ನು ಕೆಲವರು ಕೊಡುತ್ತಿರಲಿಲ್ಲ ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳದೆ ನನ್ನ ಕಲೆಯನ್ನು ನಂಬುತ್ತಾ ಬಂದೆ ಎಂದು ಗತಕಾಲವನ್ನು ನೆನಪಿಸಿಕೊಂಡರು.
ನಮ್ಮಂತ ಹಳೆಯ ನೂರಾರು ಕಲಾವಿದರು ಇದ್ದಾರೆ. ವಾಣಿಜ್ಯ ಮಂಡಳಿಯವರು ಈಗಿನ ನಿರ್ದೇಶಕರು, ನಿರ್ಮಾಪಕರಿಗೆ ಹೇಳಿ ಮತ್ತಷ್ಟು ಕಲಾಸೇವೆ ಮಾಡಿಕೊಡಲು ಅವಕಾಶ ಮಾಡಿಕೊಡಬೇಕು ಎಂದು ಚೇಂಬರ್ ಗೆ ವಿನಂತಿಸಿದರು.
ಉಮೇಶ್ ಅವರ ಮನವಿ ಆಲಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ನಿಮ್ಮ ಮನವಿಯನ್ನು ಗಂಭೀರ ವಾಗಿ ಪಣಗಿಸಿದ್ದೇವೆ. ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕ ರಿಗೆ ತಲುಪಿಸುತ್ತೇವೆ ಎಂದು ಇದೇ ವೇಳೆ ಆಶ್ವಾಸನೆ ಕೊಟ್ಟರು.
ಹಿರಿಯ ನಟ ಮತ್ತು ನಿರ್ದೇಶಕ ಬೆಂಗಳೂರು ನಾಗೇಶ್ ಅವರಿಗೂ ಸನ್ಮಾನ ಮಾಡಲಾಯಿತು. ಕಾರ್ಯದರ್ಶಿ ಸುಂದರ್ ರಾಜ್ , ಕುಮಾರ್, ಉಪಾಧ್ಯಕ್ಷ ಜೈ ಜಗದೀಶ್, ಮಾಜಿ ಅಧ್ಯಕ್ಷರಾದ ಗಂಗರಾಜು ಉಪಸ್ಥಿತರಿದ್ದರು.