ಸಾಲದಲ್ಲೂ 40% ಕಮಿಷನ್ ದಂಧೆ ನಡೆಯುತ್ತಿದೆ : ಸಿದ್ದರಾಮಯ್ಯ

Social Share

ಬೆಂಗಳೂರು, ಆ.28- ಬಿಜೆಪಿ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಅಷ್ಟೆ ಅಲ್ಲ, ಅಭಿವೃದ್ಧಿಗಾಗಿ ಮಾಡಲಾದ ಸಾಲದಲ್ಲೂ ಶೇ.40ರಷ್ಟು ಕಮಿಷನ್ ದಂಧೆ ನಡೆಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭಿರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷದ ಪ್ರಣಾಳಿಕೆಯಂತೆ ನಡೆದುಕೊಂಡೆವು. 165 ಭರವಸೆಗಳನ್ನು ಜನರಿಗೆ ನೀಡಿದ್ದೇವು, ಅವುಗಳಲ್ಲಿ 158 ಭರವಸೆಗಳನ್ನು ಐದು ವರ್ಷಗಳ ಆಡಳಿತದಲ್ಲಿ ಈಡೇರಿಸಿದ್ದೇವೆ.

ಭರವಸೆ ನೀಡದೆ ಇದ್ದ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವು. 2018ರಲ್ಲಿ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ 600 ಭರವಸೆಗಳ ಪ್ರಣಾಳಿಕೆಯನ್ನು ನೀಡಿದೆ. ಅದರಲ್ಲಿ ಎಷ್ಟು ಭರವಸೆಯನ್ನು ಈಡೇರಿಸಲಾಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಭರವಸೆಗಳಲ್ಲಿ ಶೇ.10ರಷ್ಟನ್ನು ಈಡೇರಿಸಿಲ್ಲ. ನುಡಿದಂತೆ ನಡೆಯಬೇಕು. ಶೇ.90ರಷ್ಟು ಭರವಸೆಗಳನ್ನು ಈಡೇರಿಸದೆ ಬಿಜೆಪಿ ಜನರಿಗೆ ನಂಬಿಕೆ ದ್ರೋಹ ಮಾಡಿದೆ. ಬಿಜೆಪಿ ವಚನಗಳ ವಂಚನೆ ಮಾಡಿದೆ. ಇದಕ್ಕೆ ಉತ್ತರ ಕೊಡಲಿ. ಕಾಂಗ್ರೆಸ್ ಹೇಳುತ್ತಿರುವುದು ಸರಿಯಿಲ್ಲ ಎಂದಾದರೆ ಅದನ್ನು ಹೇಳಲಿ, ದಾಖಲೆ ಕಣ್ಣೇದುರಿಗೆ ಇದೆ. ಉತ್ತರ ಕೊಡಲಿ ಎಂದರು.

150 ಲಕ್ಷ ಕೋಟಿ ಖರ್ಚು ಮಾಡಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ 48 ಸಾವಿರ ಕೋಟಿ ಮಾತ್ರ ಖರ್ಚು ಮಾಡಿದೆ. ಇನ್ನೂ 100 ಲಕ್ಷ ಕೋಟಿ ಖರ್ಚು ಮಾಡಿಲ್ಲ. ಸುಳ್ಳು ಭರವಸೆ ಯಾಕೆ ನೀಡಿದ್ದೀರಾ ಎಂದು ಪ್ರಶ್ನಿಸಿದ ಅವರು, ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದೇವು, ಐದು ವರ್ಷದಲ್ಲಿ 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ ಎಂದರು.

ರೈತರ ಒಂದು ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಈವರಗೂ ಮಾಡಿಲ್ಲ. ಸಾಲ ಮನ್ನಾ ಮಾಡಲು ನಾವೇನು ನೋಟು ಮುದ್ರಿಸುವ ಯಂತ್ರ ಇಟ್ಟುಕೊಂಡಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್‍ನಲ್ಲಿ ಉಗ್ರಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರೈತರ ಆದಾಯ ಡಬ್ಬಲ್ ಮಾಡುತ್ತೇವೆ ಎಂದಿದ್ದರು. ಅದು ಆಗಿಲ್ಲ, ಬದಲಾಗಿ ರೈತರ ಖರ್ಚುಗಳು ಹೆಚ್ಚಾಗಿವೆ ಎಂದರು.

ಮಹಿಳೆಯರು, ಯುವಕರು, ಕೃಷಿಕರು, ಪರಿಶಿಷ್ಠರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸೇರಿ ಯಾರಿಗೂ ಬಿಜೆಪಿ ಸರ್ಕಾರ ನೆರವು ನೀಡಿಲ್ಲ. ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ, ಜನಸಂಖ್ಯೆ ಆಧಾರಿಸಿ ಅನುದಾನ ಬಿಡುಗಡೆ ಮಾಡಿಲ್ಲ. ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸೋಪು, ಪೆಸ್ಟ್ ಕೊಟ್ಟಿಲ್ಲ. ನಮ್ಮ ಸರ್ಕಾರ ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವು.

ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಹೊಸದಾಗಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ, ಒಂದು ಮನೆಯನ್ನು ಕಟ್ಟಿಲ್ಲ. ನಮ್ಮ ಕಾಲದಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕಟ್ಟಲು ಭೂಮಿ ನೀಡಿ, ಹಣ ನೀಡಿ, ಗುತ್ತಿಗೆ ನೀಡಲಾಗಿತ್ತು. ಮನೆಗಳ ಹಂಚಿಕೆಗೆ ಅರ್ಜಿಯನ್ನು ಕರೆಯಲಾಗಿತ್ತು. ಬಿಜೆಪಿ ಅರ್ಜಿಗಳನ್ನು ರದ್ದು ಮಾಡಿದೆ. ಒಂದೇ ಒಂದು ಮನೆಯನ್ನು ನಿರ್ಮಿಸಿಕೊಟ್ಟಿಲ್ಲ ಎಂದರು.

ಬಿಜೆಪಿ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿಲ್ಲ, ಬದಲಿಗೆ ರಾಜ್ಯದ ಮಾನ ಮರ್ಯಾದೆ ಹಾಳು ಮಾಡಿದ್ದಾರೆ. ಲೂಟಿ ಹೊಡೆಯುವುದನ್ನು ಬಿಟ್ಟು ಬೇರೆ ಏನನ್ನು ಮಾಡುತ್ತಿಲ್ಲ. ಶೇ.40ರಷ್ಟು ಸರ್ಕಾರ ಎಂದು ಎಂದಿಗೂ ರಾಜ್ಯವನ್ನು ಯಾರು ಕರೆದಿರಲಿಲ್ಲ. ಗುತ್ತಿಗೆದಾರರು ಸಾಮಾನ್ಯವಾಗಿ ಹೆದರುತ್ತಾರೆ, ಅವರು ಹೊರಗೆ ಬಂದು ಆರೋಪ ಮಾಡುವುದು ಕಡಿಮೆ. ಆದರೆ ಬಿಜೆಪಿ ಸರ್ಕಾರ ಕಿರುಕೂಳ ತಡೆಯಾರದೆ ಪ್ರಧಾನಿಗೆ ಎರಡು ಪತ್ರ ಬರೆದಿದ್ದಾರೆ. ನನ್ನನ್ನೂ ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಮುಖ್ಯಮಂತ್ರಿಗಳು ತೊಂದರೆ ನಿವಾರಿಸುವುದಾಗಿ ಹೇಳಿದ್ದವರು ನಂತರ ಕ್ರಮ ಕೈಗೊಂಡಿಲ್ಲ ಎಂದರು.

ಚುನಾವಣೆ ಸಮಯದಲ್ಲಿ ನೀಡುವ ಭರವಸೆಗಳಿಗೆ ಬೆಲೆ ಇಲ್ಲವೇ, ಅದೇನು ಸಂಪ್ರದಾಯವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಜನ ಕೇಳುತ್ತಾರೆ ಎಂಬ ಧರ್ಮ, ಜಾತಿ ಹೆಸರಿನಲ್ಲಿ ವಿವಾದಗಳನ್ನು ಸೃಷ್ಟಿಸಿ ಜನರ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಜೊತೆಗೆ ರಾಜ್ಯದ ಮರ್ಯಾದೆಯನ್ನು ಕಳೆದಿದ್ದಾರೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ನಂತರ ನಾನು ಮುಖ್ಯಮಂತ್ರಿಯಾಗುವ ಮೊದಲು ರಾಜ್ಯದ ಮೇಲೆ 1.20 ಲಕ್ಷ ಕೋಟಿ ಸಾಲ ಇತ್ತು, ನಾನು ಕೊನೆಯ ಬಜೆಟ್ ಮಂಡಿಸಿದಾಗ ಸಾಲದ ಒಟ್ಟು ಮೊತ್ತ 2.40 ಲಕ್ಷ ಕೋಟಿ ಇತ್ತು. ಈಗ ಕಳೆದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ 5.40 ಲಕ್ಷ ಕೋಟಿ ರೂಗಳಾಗಿದೆ.

ಬಿಜೆಪಿ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ. 021-22ರಲ್ಲ ಒಂದೇ ವರ್ಷ 80 ಸಾವಿರ ಕೋಟಿ ಸಾಲ ಮಾಡಲಾಗಿದೆ. ಬಿಜೆಪಿಯವರು ಇದಕ್ಕೆ ಉತ್ತರ ಹೇಳಲಿ ಎಂದರು.

ಅಭಿವೃದ್ಧಿ ಮಾಡಲು ಸಾಲ ಮಾಡುವುದು ಸಾಮಾನ್ಯ. ಆದರೆ, ಬಿಜೆಪಿಯವರು ಸಾಲದ ಹಣವನ್ನು ಅಭಿವೃದ್ಧಿ ಬಳಸುವ ಬದಲು ಸಂಬಳ ಕೊಡಲು ಬಳಕೆ ಮಾಡಿದೆ. ಸಾಲ ಮಾಡಿದ ಹಣದಲ್ಲೂ ಶೇ.40ರಷ್ಟು ಕಮಿಷನ್ ಹೊಡೆದಿದ್ದಾರೆ. ನನ್ನ ನಲವತ್ತು ವರ್ಷಗಳ ರಾಜಕಾರಣದಲ್ಲಿ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಲು ಬಿಟ್ಟಿದ್ದನ್ನು ನೋಡಿರಲಿಲ್ಲ. ಇವರ ಕಾಲದಲ್ಲಿ ಅದು ನಡೆದಿದೆ ಎಂದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಚಾರ ನಡೆದಿರಲಿಲ್ಲವೇ ಎಂದು ಬಿಜೆಪಿ ಕೇಳುತ್ತಾರೆ. ನಮ್ಮ ಕಾಲದ್ದೂ ಸೇರಿಸಿ ತನಿಖೆ ಮಾಡಿಸಿ ಎಂದೇ ನಾವು ಹೇಳುತ್ತಿದ್ದೇವೆ. ಆದರೂ ತನಿಖೆಗೆ ಬಿಜೆಪಿ ಸರ್ಕಾರ ತಯಾರಿಲ್ಲ ಹೆದರುತ್ತಿದೆ. ದಾಖಲೆ ಕೇಳುತ್ತಾರೆ. ಇದು ಲಜ್ಜೆಗೆಟ್ಟ, ಭಂಡತನದ ಸರ್ಕಾರ ಎಂದು ಕಿಡಿಕಾರಿದ್ದಾರೆ.

ನಮ್ಮ ಕಾಲದಲ್ಲಿ ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು. ಏಕೆಂದರೆ ನಾವು ತಪ್ಪು ಮಾಡಿರಲಿಲಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.

ಪಿಎಸ್‍ಐ ನೇಮಕಾತಿಯಲ್ಲಿ ಹಗರಣ ನಡೆದಿಲ್ಲ ಎಂದು ಗೃಹ ಸಚಿವ ಅರಗ+ಜ್ಞಾನ+ಇಂದ್ರ=ಅರಗಜ್ಞಾನೆಂದ್ರ ಹೇಳಿದ್ದರು. ತನಿಖೆ ನಡೆದಾಗ ಎಡಿಜಿಪಿಯೇ ಬಂಧನವಾಗಿದೆ. ಸರ್ಕಾರದ ಕುಮ್ಮಕ್ಕಿಲ್ಲದೆ ಹಗರಣ ನಡೆಯಲು ಸಾಧ್ಯವೇ, ಎಲ್ಲವನ್ನೂ ಅಕಾರಿಗಳ ಮೇಲೆ ಹಾಕಿ ಸುಮ್ಮನೆ ಉಳಿದು ಬಿಟ್ಟಿದ್ದಾರೆ. ಕೆಪಿಸಿಎಲ್ ನೇಮಕಾತಿಯಲ್ಲೂ ಭಾರೀ ಭ್ರಷ್ಟಾಚಾರ ನಡೆದಿದೆ. ಇದು ಅವರ ಬಂಡತನಕ್ಕೆ ಸಾಕ್ಷಿ. ಬಸವರಾಜ ಬೊಮ್ಮಾಯಿ ದುರ್ಬಲ ಮತ್ತು ಭ್ರಷ್ಟ ಮುಖ್ಯಮಂತ್ರಿ ಎಂದು ದೂರಿದರು.

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಸಚಿವ ಶ್ರೀರಾಮಲು ಹೇಳಿದ್ದರು. ಪ್ರತಿಮಾತಿಗೂ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳುವ ಅವರಲ್ಲಿ ರಕ್ತವಿದೆಯೋ ವಿಷ ಇದೆಯೇನೋ ಗೋತ್ತಿಲ್ಲ.

ಯಡಿಯೂರಪ್ಪ ಅವರು ಈ ಮೊದಲು ಸಾಲ ಮನ್ನಾ ಮಾಡುವುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು.
ಜನರ ಸಮಸ್ಯೆಯನ್ನು ಬೇರೆ ಸೆಳೆಯಲು ಅನಗತ್ಯ, ಭಾವನಾತ್ಮಕ ವಿಚಾರಗಳನ್ನು ಚರ್ಚೆಗೆ ತಂದು ಗಂಭಿರ ಸಮಸ್ಯೆಗಳನ್ನು ಮರೆ ಮಾಚುತ್ತಿದ್ದಾರೆ. ಇದಕ್ಕಾಗಿ ಕೋಮುವಾದ ಬಿತ್ತಲಾಗುತ್ತಿದೆ. ನಾವು ಜನರಿಗೆ ಸುಳ್ಳು ಹೇಳುವುದಿಲ್ಲ, ಸತ್ಯ ಹೇಳಲು ಬಿಜೆಪಿ ಉತ್ತರ ಕೊಡಿ ಅಭಿಯಾನ ಶುರು ಮಾಡಿದ್ದೇವೆ ಎಂದರು.

Articles You Might Like

Share This Article