ಬೆಂಗಳೂರು,ಆ.26- ಹಾಳಾಗಿರುವ ನಗರದ ರಸ್ತೆಗಳನ್ನು ನಾಳೆಯಿಂದ ಸಮರೋಪಾದಿಯಲ್ಲಿ ದುರಸ್ತಿಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಳೆದ ಮೇ ತಿಂಗಳಿನಲ್ಲಿ 20 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವು. ಆದರೆ, ಇತ್ತಿಚೆಗೆ ಭಾರಿ ಮಳೆಯಾಗುತ್ತಿರುವುದರಿಂದ ಮತ್ತೆ ರಸ್ತೆಗಳಲ್ಲಿ ಗುಂಡಿ ಬೀಳುತ್ತಿವೆ ಎಂದು ಮಾಹಿತಿ ನೀಡಿದರು.
ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ನಮಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ಬಂದಾಗ ಹಾಟ್ ಮೀಕ್ಸ್ ಬಳಸಲು ಸಾಧ್ಯವಾಗುತ್ತಿಲ್ಲ. ಕೋಲ್ಡ್ ಮಿಕ್ಸ್ ಸಂಗ್ರಹಿಸಲು ನಮ್ಮಲ್ಲಿ ಜಾಗವಿಲ್ಲ. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ.
ರಸ್ತೆ ಗುಂಡಿ ಮುಚ್ಚುವ ಕುರಿತಂತೆ ನಿನ್ನೆ ನಾನು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಇದುವರೆಗೂ ಕೇವಲ 10 ಲೋಡ್ ಹಾಟ್ ಮಿಕ್ಸ್‍ಅನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.
ಆದರೆ, ನಗರದಲ್ಲಿ ರಸ್ತೆ ಗುಂಡಿಗಳನ್ನು ಹೆಚ್ಚಾಗುತ್ತಿರುವುದರಿಂದ ನಾವು ನಾಳೆಯಿಂದ 40 ಲೋಡ್ ಹಾಟ್ ಮಿಕ್ಸ್ ಬಳಕೆ ಮಾಡಿಕೊಂಡು ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸುತ್ತಿದ್ದೇವೆ ಎಂದು ಅವರು ವಿವರಣೆ ನೀಡಿದರು.
ನಾವು ಪ್ರತಿವರ್ಷ 25 ರಿಂದ 30 ಕೋಟಿ ರೂ.ಗಳನ್ನು ಮಾತ್ರ ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡುತ್ತಿದ್ದೇವೆ. ರಸ್ತೆ ಗುಂಡಿಗೆ ಬಿದ್ದು ಕೆಲವರು ಪ್ರಾಣ ಕಳೆದುಕೊಂಡಿರುವುದರ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಆ ಕುರಿತಂತೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.