ಬೆಂಗಳೂರು, ಫೆ.15- ರಾಜ್ಯದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸಪೂಜಾರಿ ವಿಧಾನಸಭೆಗೆ ತಿಳಿಸಿದರು.
ಆಡಳಿತ ಪಕ್ಷದ ಶಾಸಕ ಮಸಾಲೆ ಜಯರಾಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 830 ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿದ್ದು, 590 ಸರ್ಕಾರಿ ಹಾಗೂ 240 ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳಿಗೆ ಬಾಡಿಗೆ ಮತ್ತಿತರ ವೆಚ್ಚಕ್ಕೆ 1000 ಕೋಟಿ ರೂ. ಅನುದಾನದ ಅಗತ್ಯವಿದೆ. ಇದರಲ್ಲಿ 700 ಕೋಟಿ ರೂ. ಆರು ತಿಂಗಳ ಅವಯಲ್ಲಿ ಬಿಡುಗಡೆ ಮಾಡಿದ್ದೇವೆ. ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದರು.
ತುಮಕೂರು ಜಿಲ್ಲೆ ತುರುವೇ ಕೆರೆ ತಾಲ್ಲೂಕಿನ ದಂಡಿನಶಿವಾರ ಹೋಬಳಿಯ ಚಾಕೋವಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುತ್ತೇವೆ. ಶೀಘ್ರದಲ್ಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸುವುದಾಗಿ ತಿಳಿಸಿದರು.
ಶಾಸಕ ಕೃಷ್ಣಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಹೆಚ್ಚಿನ ಆದ್ಯತೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿರುವುದಾಗಿ ಹೇಳಿದರು.
ಕಳೆದ ಬಜೆಟ್ನಲ್ಲಿ 37 ವಸತಿ ಶಾಲೆ ಮಂಜೂರು ಮಾಡಲಾಗಿತ್ತು. ಇದರಲ್ಲಿ 11 ವಸತಿ ಶಾಲೆಗಳಿಗೆ ಕಾಮಗಾರಿ ಅರಂಭವಾಗಿದ್ದು, ಉಳಿದ ಶಾಲೆಗಳನ್ನು ಈ ವರ್ಷದ ಬಜೆಟ್ನಲ್ಲಿ ಸೇರಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಬಜೆಟ್ ಬಳಿಕ ಉಳಿದ ಶಾಲೆಗಳ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
#committed, #basicfacilities, #AmbedkarResidentialSschools,