“ಕೋಮುದ್ವೇಷದ ವಿಷ ಬೀಜ ಬಿತ್ತಲು ತನು-ಮನ-ಧನ ಅರ್ಪಿಸುವ ಪಕ್ಷ ಬಿಜೆಪಿ”

Social Share

ಬೆಂಗಳೂರು,ಮಾ.13- ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮುದ್ವೇಷ ಹರಡಿ, ಜನರ ತಲೆಯಲ್ಲಿ ವಿಷ ಬೀಜ ಬಿತ್ತಿ ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷವೆಂದರೆ ಬಿಜೆಪಿ ಎಂದು ಜೆಡಿಎಸ್ ಆರೋಪಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಟಿಪ್ಪು ಸುಲ್ತಾನನನ್ನು ಕೊಂದವರು ಎನ್ನಲಾಗುವ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡ ಎಂಬ ಹೆಸರುಗಳನ್ನು ಪ್ರಧಾನಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಏಕೆ ಎಂದು ಪ್ರಶ್ನಿಸಿದೆ.

ಮಹಾದ್ವಾರಕ್ಕೆ ಇದ್ದ ಒಕ್ಕಲಿಗರ ಗುರು ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರನ್ನು ಮುಚ್ಚಿ, ಆ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ್ದ ಉದ್ದೇಶವೇನು? ಇಂತಹ ಚಿಲ್ಲರೆ, ದ್ವೇಷ ತುಂಬಿದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ಶತಮೂರ್ಖತನ ಎಂದು ಟೀಕಿಸಿದೆ.

ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಹಾಗೂ ಪ್ರಗತಿಪರ ಸಂಘನೆಗಳಿಂದ ವಿರೋಧ ವ್ಯಕ್ತವಾಗಿದ್ದೆ ತಡ, ಜಿಲ್ಲಾಡಳಿತವು ಈ ಹೆಸರನ್ನು ತೆರವುಗೊಳಿಸಿದೆ. ಇಂತಹ ನಿರ್ಲಜ್ಜಗೇಡಿ ನಡೆಯು ಇಡೀ ರಾಜ್ಯ ಬಿಜೆಪಿ ಸರ್ಕಾರದ ನೀಚ ರಾಜಕಾರಣಕ್ಕೆ ಹಿಡಿದ ಕನ್ನಡಿ. ಸುಳ್ಳುಗಳಿಗೆ ಆಯಸ್ಸು ಬಹಳ ಕಮ್ಮಿ ಎಂದು ವಾಗ್ದಾಳಿ ನಡೆಸಿದೆ.

ನೈಸ್‍ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಲಾರಿ ಮಾಲೀಕರ ಆಕ್ರೋಶ

ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ಸಿ.ಟಿ.ರವಿಯವರೆ, ಉರಿಗೌಡ, ನಂಜೇಗೌಡನ ಹೆಸರಲ್ಲಿ ಶಾಶ್ವತ ದ್ವಾರ ನಿರ್ಮಿಸುತ್ತೀರಾ? ನಾಚಿಕೆಯಾಗಬೇಕು ನಿಮಗೆ. ಕೊಳಕು ಮಟ್ಟದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ನಿಮಗೆ ಪ್ರಧಾನಿಯವರ ಗುಲಾಮಗಿರಿ ಮಾಡುವ ಅನಿವಾರ್ಯತೆ ಇದೆ. ಒಕ್ಕಲಿಗರು ಸ್ವಾಭಿಮಾನಕ್ಕೆ ಹೆಸರಾದವರು.

ಇಡೀ ಒಕ್ಕಲಿಗ ಸಮುದಾಯವನ್ನ ಅಪಹಾಸ್ಯಕ್ಕೆ ಗುರಿ ಮಾಡುವ ಮೂಲಕ ಏನನ್ನು ಸಾಧಿಸಲು ರಾಜ್ಯ ಬಿಜೆಪಿ ಪಕ್ಷ ಹೊರಟಿದೆ ಎಂಬುದು ಸ್ಪಷ್ಟ. ಅವರ ಈ ಧ್ರುವೀಕರಣದ ರಾಜಕೀಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಳಸಿದರೆ ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಕಲ್ಪನೆ ಅವರಿಗಿದೆ. ಅದರ ಭಾಗವಾಗಿಯೇ ಈ ಪ್ರಯೋಗ ಎಂದು ಟೀಕಾ ಪ್ರಹಾರ ನಡೆಸಿದೆ.

ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ : ಡಿಕೆಶಿ

ಈ ಕುತಂತ್ರಿ ರಾಜಕಾರಣ ನಡೆಸಲು ಪ್ರಧಾನಿಯವರೆ ರಾಜ್ಯ ಬಿಜೆಪಿಗೆ ನಿರ್ದೇಶನ ನೀಡಿದರೆ? ಆರ್‍ಎಸ್‍ಎಸ್ ಪ್ರಣೀತ ಸಿದ್ಧಾಂತದ ಆಧಾರದಲ್ಲಿ ದ್ವೇಷವನ್ನು ಹರಡಲು ಒಕ್ಕಲಿಗ ಸಮುದಾಯವನ್ನು ಕೊಲೆಗಡುಕರು ಎಂದು ಚಿತ್ರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.

ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ ಮತ್ತು ಸಮನ್ವಯ ತತ್ವಗಳನ್ನು ಅಳವಡಿಸಿಕೊಂಡು ಬೆಳೆದಿದ್ದು ಈ ನಾಡಿನ ಒಕ್ಕಲಿಗ ಸಮುದಾಯದ ಹೆಗ್ಗಳಿಕೆ. ದ್ವೇಷ ಮತ್ತು ಹಸಿ ಸುಳ್ಳುಗಳನ್ನು ಅವರೆಂದು ಪೋಷಿಸಿ, ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಷ್ಟು ನಿಕೃಷ್ಟವಾದ ರಾಜಕಾರಣಕ್ಕೆ ಇಳಿಸಿ, ಬಳಸಬಹುದು
ಎಂಬ ಚಿಂತನೆಯೇ ಹೊಲಸು ಎಂದಿದೆ.

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ

ಇಂತಹ ಚಿಲ್ಲರೆ ರಾಜಕಾರಣವು ಈ ಸಲದ ಚುನಾವಣೆಯಲ್ಲಿ ಯಾವ ಫಲವನ್ನೂ ನೀಡುವುದಿಲ್ಲ. ನಾಡಿನ ಒಕ್ಕಲಿಗ ಸಮುದಾಯ ಬಹಳ ಪ್ರಬುದ್ಧವಾಗಿ ಈ ಮಹಾ ಸುಳ್ಳಿನ ರಾಜಕಾರಣವನ್ನು ಎದುರಿಸಲಿದೆ. ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಕಟ್ಟಿಟ್ಟಬುತ್ತಿ. ಸತ್ಯ, ಸಹಬಾಳ್ವೆ ಮತ್ತು ವಿಶ್ವ ಮಾನವ ತತ್ವವಷ್ಟೇ ಗೆಲ್ಲಲಿದೆ ಎಂದು ಹೇಳಿದೆ.

Articles You Might Like

Share This Article