ಸರ್ಕಾರವನ್ನು ನಿರಂತರವಾಗಿ ಕಾಡುತ್ತಿರುವ ಮೀಸಲಾತಿ ಹೋರಾಟಗಳು

Social Share

ಬೆಂಗಳೂರು,ಆ.27- ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಹೋರಾಟಗಳು ಬೆಂಬಿಡದಂತೆ ಕಾಡುತ್ತಿವೆ. ಈಗ ಚುನಾವಣಾ ಸಮಯವಾಗಿರುವುದರಿಂದ ಈ ಹೋರಾಟಗಳು ಇನ್ನಷ್ಟು ತಲೆನೋವಾಗಿ ಪರಿಣಮಿಸಿ ಅಕ್ಷರಶಃ ಬಿಸಿತುಪ್ಪವಾಗಿ ಪರಿಣಮಿಸಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಬೊಮ್ಮಾಯಿ ಬಂದರೂ ಹೋರಾಟದ ಕಿಚ್ಚು ಮಾತ್ರ ನಿಂತಿಲ್ಲ.

ಇದು ಸಹಜವಾಗಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ಮೂರು ಪ್ರಮುಖ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಇದರ ಜೊತೆ ಇದೀಗ ಹೊಸದೊಂದು ಹೋರಾಟ ಸೇರಿಕೊಂಡಿದ್ದು ಒಟ್ಟು ನಾಲ್ಕು ಸಮುದಾಯಗಳು ಮೀಸಲಾತಿಗಾಗಿ ಬೀದಿಗಿಳಿದಿವೆ.

ಪಂಚಮಸಾಲಿ, ಕುರುಬ, ವಾಲ್ಮೀಕಿ ಮತ್ತು ಜಂಗಮ ಸಮುದಾಯ ಹೋರಾಟ ನಡೆಸುತ್ತಿವೆ. ಬಹಳ ಪ್ರಮುಖವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯದ ಹೋರಾಟ ತೀವ್ರಗತಿಯತ್ತ ಸಾಗುತ್ತಿದೆ. ಹಿಂದುಳಿದ 2-ಎಗೆ ಸೇರ್ಪಡೆ ಮಾಡುವಂತೆ ಬೇಡಿಕೆ ಇರಿಸಿಕೊಂಡು 2021ರ ಜನವರಿ 14ರಂದು ಬವಕಲ್ಯಾಣದಿಂದ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ ಪಾದಯಾತ್ರೆ ಮೂಲಕ ಬೆಂಗಳೂರು ಚಲೋ ನಡೆಸಿತು. ಅಲ್ಲದೇ, ಫ್ರೀಡಂ ಪಾರ್ಕ್‍ನಲ್ಲಿ ಸತ್ಯಾಗ್ರಹ ನಡೆಸಲಾಗಿತ್ತು.

ಸರ್ಕಾರ ಪಂಚಮ ಸಾಲಿ ಉಪ ಪಂಗಡವನ್ನು 3-ಬಿ ಪ್ರವರ್ಗದಿಂದ 2-ಎ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸೇರಿದಂತೆ ಇತರೆ ಸಮುದಾಯಗಳ ಮೀಸಲು ಬೇಡಿಕೆ ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಗೆ 2021ರ ಜುಲೈ 1ರಂದು ಆದೇಶ ಹೊರಡಿಸಿತ್ತು.

ಇದೀಗ ಬಸವ ಜಯಮೃತ್ಯುಂಜಯ ಶ್ರೀಗಳು ಮತ್ತೆ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗ(ಎಸ್ಟಿ)ಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಶ್ರೀಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಾಯಿತು.

2021ರ ಜನವರಿ 15 ರಿಂದ ಆರಂಭಗೊಂಡ ಪಾದಯಾತ್ರೆ ಫೆಬ್ರವರಿ 7ರಂದು ಅರಮನೆ ಮೈದಾನದಲ್ಲಿ ಕುರುಬರ ಜಾಗೃತಿ ಸಮಾವೇಶದ ಮೂಲಕ ಮುಕ್ತಾಯವಾಯಿತು. ಈ ವೇಳೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ರಾಜಕಾರಣಿಗಳು ಭಾಗಿಯಾಗಿ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎನ್ನುವ ಘೋಷಣೆಯನ್ನು ಈ ಸಮುದಾಯ ಮೊಳಗಿಸಿತ್ತು.

ಎಸ್‍ಟಿ ಮೀಸಲಾತಿಗೆ ಸೇರ್ಪಡೆ ಮಾಡಲು ಕುಲಶಾಸ್ತ್ರೀಯ ಅಧ್ಯಯನವನ್ನು ಸರ್ಕಾರ ಕೂಡಲೇ ತರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಮೊದಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದಿಂದ ವರದಿ ಪಡೆದು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬೇಕು ಎಂಬ ಆದೇಶ ಹಿಂಪಡೆಯಬೇಕೆಂಬ ಬೇಡಿಕೆ ಸಮುದಾಯದ್ದಾಗಿದೆ. ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದೆಯಾದರೂ ಇದು ಕಬ್ಬಿಣದ ಕಡಲೆಯಾಗಿದ್ದು, ಯಾವಾಗ ಬೇಕಾದರೂ ಮತ್ತೆ ಹೋರಾಟ ತೀವ್ರ ಸ್ವರೂಪಕ್ಕೆ ಬರುವ ಸಾಧ್ಯತೆ ಇದೆ.

ವಾಲ್ಮೀಕಿ ಸಮುದಾಯದ ಹೋರಾಟ: ವಾಲ್ಮೀಕಿ ಸಮುದಾಯ ಮೀಸಲಾತಿ ಪ್ರಮಾಣ 7.5ಕ್ಕೆ ಹೆಚ್ಚಿಸಬೇಕೆಂದು ಮತ್ತೆ ಮುನ್ನಲೆಗೆ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮೀಸಲಾತಿ ಕುರಿತು ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿತ್ತು. ಈ ಆಯೋಗದ ವರದಿ ಬರುತ್ತಿದ್ದಂತೆ ಮೀಸಲಾತಿ ಆದೇಶ ಹೊರಡಿಸುವ ಭರವಸೆ ಸಹ ನೀಡಲಾಗಿತ್ತು. ಆದರೆ, ಇದುವರೆಗೂ ಇದನ್ನು ಜಾರಿಗೆ ಕ್ರಮ ಕೈಗೊಂಡಿಲ್ಲ.

ಸಮುದಾಯದ ಶಾಸಕರ ಮೂಲಕ ಒತ್ತಡ ಹಾಕಿಸುವ ಪ್ರಯತ್ನ ನಡೆಸಿದರೂ ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರಿಲ್ಲ. ಇದೀಗ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಪತಿ ಪ್ರಸನ್ನಾನಂದಪುರಿ ಸ್ವಾಮೀಜಿ 150ಕ್ಕೂ ಹೆಚ್ಚು ದಿನದಿಂದ ಸತ್ಯಾಗ್ರಹ ಕೈಗೊಂಡಿದ್ದಾರೆ.

ಭೇಟಿಜಂಗಮರ ಹೋರಾಟ: ಬೇಡ ಜಂಗಮ ಸಮುದಾಯದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದು, ನ್ಯಾಯಯುತವಾಗಿ ಪರಿಶಿಷ್ಟಜಾತಿ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವದಿ ಧರಣಿ ಆರಂಭಿಸಿದೆ.

ಬೇಡ ಜಂಗಮ ಜನಾಂಗದಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇಡ ಜಂಗಮರು ಬೇರೆ, ರಾಜ್ಯದಲ್ಲಿರುವ ಬೇಡ ಜಂಗಮರು ಬೇರೆ ಎಂದು ಬಿಂಬಿಸಲಾಗುತ್ತಿದೆ. ವೀರಶೈವ ಲಿಂಗಾಯತ ಪಂಥದ ಅನುಯಾಯಿಗಳೇ ಬೇಡ ಜಂಗಮರು. ಇದಕ್ಕೆ ನ್ಯಾಯಾಲಯ ತೀರ್ಪು ಮತ್ತು ಆದೇಶಗಳಿವೆ. ಆದರೂ, ನಮ್ಮನ್ನು ಪರಿಶಿಷ್ಟ ಜಾತಿಯಿಂದ ದೂರ ಮಾಡುವ ಯತ್ನ ನಡೆಯುತ್ತಿವೆ. ಸರ್ಕಾರ ಕೂಡಲೇ ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸತ್ಯಾಗ್ರಹ ನಡೆಸಲಾಗುತ್ತಿದೆ.

ಒಕ್ಕಲಿಗರ ಬೇಡಿಕೆ: ಈ ನಡುವೆ ಒಕ್ಕಲಿಗ ಸಮುದಾಯದ ಎಲ್ಲ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಅನೇಕ ಉಪ ಜಾತಿಗಳು ಸಮಲತ್ತುಗಳಿಂದ ವಂಚಿತಗೊಂಡಿವೆ. ಹಾಗಾಗಿ ಈ ಎಲ್ಲ ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕಾಗಿದ್ದು, ಇದಕ್ಕಾಗಿ ಹೋರಾಟ ನಡೆಸಬೇಕಾಗಿದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ಆದರೆ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಈ ಹೋರಾಟದ ಕಾವು ಕಡಿಮೆಯಾಗಿದೆ.

Articles You Might Like

Share This Article