ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

Social Share

ಬೆಂಗಳೂರು, ಅ.12- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕಾನೂನು ನಿಯಮ ಗಾಳಿಗೆ ತೂರಿ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಡಿ ನೋಟಿಫಿಕೇಷನ್ ಮಾಡಿದ್ದಾರೆಂದು ಆರೋಪಿಸಿರುವ ಬಿಜೆಪಿ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಈ ಕೂಡಲೇ ಪ್ರಕರಣವನ್ನು ಸರ್ಕಾರ ಸಿಬಿಐ ಅಥವಾ ಸಿಐಡಿ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿಂದು ಪ್ರಕರಣ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತಾನಾಡಿದ ಅವರು, ಈ ಸಂಬಂಧ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಬೆಂಗಳೂರಿನ ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಲಾಲ್‍ಬಾಗ್ ಸಿದ್ಧಾಪುರ ಗ್ರಾಮದ ಸರ್ವೆ ಸಂಖ್ಯೆ 27/1, 28/4, 28/5 ಮತ್ತು 28/6 ರ 02 ಎಕರೆ 39 ಗುಂಟೆಯಷ್ಟು ಸ್ವತ್ತನ್ನು ಬಿಡಿಎ ಮಾಸ್ಟರ್ ಯೋಜನೆಯಂತೆ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗವೆಂದು ಮೀಸಲಿಡಲಾಗಿತ್ತು.

ನಿಯಮಗಳಿಗನುಸಾರ ಇಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯುವುದು ಕಾನೂನು ಬಾಹಿರ ಕಾರ್ಯವಾಗಿದೆ. ಇನ್ನು ಇದರ ವ್ಯಾಪ್ತಿಯಲ್ಲಿ ನರ್ಸರಿಗಳು ಇದ್ದುದರಿಂದ ಭೂ ಸ್ವಾೀಧಿನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ.

ಹೀಗಿದ್ದರೂ ಬಿಡಿಎ ಈ ಭಾಗದ ಉಳಿದ ಜಮೀನುಗಳನ್ನು ಮತ್ತು ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದ ಸ್ವತ್ತನ್ನು ಭೂ ಸ್ವಾೀಧಿನ ಪಡಿಸಿಕೊಂಡಿತ್ತಲ್ಲದೆ, ಈ ಸ್ವತ್ತನ್ನು ಉದ್ಯಾನವನ ಮತ್ತು ಸಾರ್ವಜನಿಕರ ಬಳಕೆಯ ಉದ್ದೇಶಕ್ಕೆಂದು ಮೀಸಲಿಟ್ಟಿದೆ.

ಈ ನರ್ಸರಿಗಳಿದ್ದ ಸ್ವತ್ತುಗಳನ್ನು, ಉದ್ಯಾನವನ ಮತ್ತು ಸಾರ್ವಜನಿಕರ ಬಳಕೆಗೆಂದು ಮೀಸಲಿಟ್ಟಿದ್ದ ಎರಡು ಎಕರೆ 39 ಗುಂಟೆ ಸ್ವತ್ತಿನ ಸಹಿತ ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ ಒಬ್ಬರು ಕಾನೂನುಬಾಹಿರವಾಗಿ ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದರು.

ನಂತರ ಈ ಸ್ವತ್ತುಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಬಳಕೆಗೆ ಪರಿವರ್ತಿಸಿಕೊಡಬೇಕೆಂಬ ಮನವಿಯನ್ನು ರಾಜ್ಯ ಸರ್ಕಾರದ ಸಮಿತಿಗೆ ಅಶೋಕ್ ಧಾರಿವಾಲ್ ಸಲ್ಲಿಸಿದಾಗ ಎರಡು ಬಾರಿ 2013ಕ್ಕೂ ಮೊದಲು ರಾಜ್ಯ ಸರ್ಕಾರದ ಸಮಿತಿಯು ತಿರಸ್ಕರಿಸಿದೆ.

ಅಲ್ಲದೆ, ಸರ್ವೋಚ್ಛ ನ್ಯಾಯಾಲಯವು, ಪುರುಷೋತ್ತಮ್ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಲಿ ಅಥವಾ ನೀಡುವುದಾಗಲಿ ಮಾಡುವಂತಿಲ್ಲ ಎಂದು ಆದೇಶವನ್ನು ನೀಡಿದೆ.

ಹಾಗೆಯೇ, ಹೈಕೋರ್ಟ್ ಸಹ ಇದೇ ಸ್ವತ್ತಿಗೆ ಸಂಬಂಧಿಸಿದಂತೆ ತನ್ನಲ್ಲಿ ದಾಖಲಾದ ಪ್ರಕರಣಕ್ಕೆ ಉದ್ಯಾನವನಗಳು ಮತ್ತು ಸಾರ್ವಜನಿಕ ಬಳಕೆಗೆಂದು ಮೀಸಲಿಟ್ಟ ಸ್ಥಳಗಳನ್ನು ಡಿ ನೋಟಿಫೈ ಮಾಡುವ ಮುನ್ನ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಮುಂದೆ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಆದೇಶಿಸಿದೆ ಎಂದು ವಿವರಿಸಿದರು.

ಆದರೆ, ಆಗ ತಾನೇ ರಚನೆಯಾಗಿದ್ದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಬಿಎಂಪಿಸಿಯು ಒಂದು ಬಾರಿಯೂ ಸಭೆಯನ್ನು ಸೇರಿರುವುದಿಲ್ಲ. ಹೈಕೋರ್ಟ್ ಆದೇಶದಂತೆ ಬಿಎಂಪಿಸಿಯ ಮುಂದೆ ಮಂಡಿಸಿ, ಸಮಿತಿಯ ಎಲ್ಲ ಸದಸ್ಯರಿಂದ ಒಪ್ಪಿಗೆಯ ನಿರ್ಣಯಕ್ಕೆ ಸಹಿ ಹಾಕಿಸಿಕೊಂಡ ನಂತರವಷ್ಟೇ ಸದರಿ ಎರಡು ಎಕರೆ 39 ಗುಂಟೆ ಜಮೀನನ್ನು ಡಿ ನೋಟಿಫೈ ಮಾಡಿಕೊಡಲು ಮುಖ್ಯಮಂತ್ರಿಗಳು ಕ್ರಮ ವಹಿಸಬೇಕಿತ್ತು.

ಹೀಗಿದ್ದರೂ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 2014ನೇ ಸಾಲಿನಲ್ಲಿ ಸಿದ್ದಾಪುರ ಬಡಾವಣೆಯ ಕನಿಷ್ಠ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 1,30,680 ಚದರ ಅಡಿಗಳಷ್ಟು ವಿಸ್ತೀರ್ಣದ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್‍ನ ಪ್ರಭಾವಕ್ಕೆ ಮಣಿದು ಡಿನೋಟಿಫೈ ಮಾಡಿಕೊಟ್ಟಿದ್ದಾÁರೆ ಎಂದು ದೂರಿದರು.

ಕಾನೂನು ಪದವೀಧರರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಚಾಣಾಕ್ಷತನದಿಂದ ಡಿ ನೋಟಿಫೈ ಬದಲಾಗಿ ರೀ-ನೋಟಿಫೈ ಎಂಬ ಪದವನ್ನು ಬಳಸಿ ಈ ಕಾನೂನು ಬಾಹಿರ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ ಎಂದು ಅವರು ಆಪಾದಿಸಿದರು.

ಆದ್ದರಿಂದ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರೀ ಡಿನೋಟಿಫೈ ಎಂಬ ಹೆಸರಿನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅಂದಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶ್ಯಾಮ್‍ಭಟ್, ಅಶೋಕ್ ಧಾರಿವಾಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಮತ್ತು ಸರ್ಕಾರಿ ಭೂ ಕಬಳಿಕೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

Articles You Might Like

Share This Article