ಬೆಂಗಳೂರು,ಫೆ.21- ಹಿರಿಯ ಕಲಾವಿದ, ಕಲಾತಪಸ್ವಿ ಡಾ.ರಾಜೇಶ್ ಅವರ ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೇಶ್ ಅವರ ನಿಧನವನ್ನು ಸದನದ ಗಮನಕ್ಕೆ ತಂದು ಸಂತಾಪ ಸೂಚನೆಯನ್ನು ಮಂಡಿಸಿದರು.
1935 ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೇಶ್ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರ ಲಿಪಿಗಾರರಾಗಿ ಕೆಲಸ ನಿರ್ವಹಿಸಿದ್ದರು. ಇವರ ಮೂಲ ಹೆಸರು ಮುನಿಚೌಡಪ್ಪ. ಪ್ರೌಢಶಾಲಾ ದಿನಗಳಲ್ಲೇ ರಂಗಭೂಮಿಯ ಸೆಳೆತ ಅಪಾರವಾಗಿದ್ದು, ಸುದರ್ಶನ್ ನಾಟಕ ಮಂಡಳಿ ಸ್ಥಾಪಿಸಿ ನಿರುದ್ಯೋಗಿ ಬಾಳು, ಬಡವ ಬಾಳು, ವಿಷ ಸರ್ಪ, ನಂದಾದೀಪ ಮುಂತಾದ ನಾಟಕಗಳನ್ನು ನಾಡಿನೆಲ್ಲೆಡೆ ಪ್ರದರ್ಶಿಸಿದರು. ನಾಟಕಗಳ ಜನಪ್ರಿಯತೆಯಿಂದ ಚಿತ್ರರಂಗಕ್ಕೆ ವೀರಸಂಕಲ್ಪ ಚಿತ್ರದ ಮೂಲಕ ಪಾದರ್ಪಣೆ ಮಾಡಿದರು.
1968ರಲ್ಲಿ ನಮ್ಮ ಊರು ಚಿತ್ರದಿಂದ ಪ್ರಸಿದ್ಧಿ ಹೊಂದಿದ್ದ ರಾಜೇಶ್ ಅವರು ಸತಿ ಸುಕುನ್ಯ, ಬಲೆಭಾಸ್ಕರ, ಪಿತಾಮಹಾ, ಗಂಗೆ ಗೌರಿ ಮುಂತಾದ 150ಕ್ಕೂ ನಾಯಕ ಪ್ರಧಾನ ಪಾತ್ರಗಳು ಹಾಗೂ ವೈವಿದ್ಯಮಯ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.ನಟನಾ ಪ್ರೌಢಿಮೆ, ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದೆ. ಡಾ.ರಾಜ್‍ಕುಮಾರ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್ ಅವರ ಸಮಕಾಲಿನರಾಗಿ ಮಹಾನ್ ಪ್ರತಿಭೆಗಳ ನಡುವೆ ತಮ್ಮದೇ ಆದ ವಿಶಿಷ್ಟ ಚಾಪನ್ನು ಮೂಡಿಸಿದ್ದರು.
ಶಿಸ್ತಿನ ಶಿಪಾಯಿ ಎಂದೆ ಪ್ರಖ್ಯಾತಿಯಾಗಿದ್ದರು. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರಿಗೆ ಧಾರವಾಡ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ರಾಜೇಶ್ ಅವರ ನಿಧನದಿಂದ ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ಕಲಾವಿದರನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ, ಅಶ್ವಥ್ ಅವರು ಉತ್ತಮ ಪೋಷಕ ನಟರಾಗಿ ಅಭಿನಯಿಸುತ್ತಿದ್ದ ಕಾಲಘಟ್ಟದಲ್ಲಿ ರಾಜೇಶ್ ಅವರು ನಾಯಕ ನಟನ ಪಾತ್ರದಿಂದ ಪೋಷಕ ನಟರ ಪಾತ್ರಗಳಿಗೆ ಪರಿವರ್ತನೆಯಾಗಿ ತಮ್ಮ ನಟನಾ ಪ್ರೌಢಿಮೆಯಿಂದ ಜನಮನ ಸೆಳೆದರು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜೇಶ್ ಅವರು ರಂಗಭೂಮಿಯಲ್ಲಿದ್ದ ಕಾಲದಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರತಿ ದಿನ ಒಂದೊಂದು ನಾಟಕ ನಡೆಯುತ್ತಿತ್ತು. ಕುಮಾರತ್ರಯರ ನಡುವೆ ರಾಜೇಶ್ ಅವರು ತಮ್ಮದೇ ಆದ ಚಾಪು ಮೂಡಿಸಿದ್ದರು ಎಂದು ಹೇಳಿದರು.
ನಂತರ ಒಂದು ನಿಮಿಷದ ಮೌನಾಚರಣೆ ಮೂಲಕ ಸಂದನ ಸಂತಾಪ ಸೂಚಿಸಿತು.
ಸಂತಾಪ ಸೂಚನೆಗೆ ಧರಣಿ ನಿರಂತರ ಕಾಂಗ್ರೆಸ್ ಶಾಸಕರು ಸಹಕಾರ ನೀಡಿದರು. ಯಾವುದೇ ಘೋಷಣೆ ಕೂಗದೆ, ಗದ್ದಲ ಮಾಡದೆ ಮೌನವಾಗಿದ್ದರು. ಸಭಾಪತಿಯವರ ಮನವಿ ಮೇರೆಗೆ ತಮ್ಮ ಸ್ವಸ್ಥಾನಕ್ಕೆ ತೆರಳಿದ್ದರು. ಸಂತಾಪ ನಿರ್ಣಯದ ನಂತರ ಧರಣಿ ಮುಂದುವರೆಸಿದರು.
