ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ರಾಜ್ಯಮಟ್ಟದ ಅರ್ಚಕರ ಸಮಾವೇಶ

Social Share

ಬೆಂಗಳೂರು ಜುಲೈ 18: ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಅರ್ಚಕರ ರಾಜ್ಯಮಟ್ಟದ ಸಮಾವೇಶವನ್ನು ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಆಯೋಜಿಸಲಾಗುವುದು ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದರು.

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 16 ನೇ ಸಭೆಯಲ್ಲಿ ರಾಜ್ಯದ ಹಲವಾರು ಧಾರ್ಮಿಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧಾರಗಳನ್ನು ತಗೆದುಕೊಳ್ಳಲಾಯಿತು. ರಾಜ್ಯ ಸರಕಾರ ಮುಜರಾಯಿ ಅರ್ಚಕರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹೊರತಂದಿದೆ.

ತಸ್ಥಿಕ್‌ ಹಣ ಹೆಚ್ಚಳ, ಅರ್ಚಕರುಗಳಿಗೆ ವಿಮಾ ಸೌಲಭ್ಯ ಸೇರಿದಂತೆ ಹಲವಾರು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇದಕ್ಕಾಗಿ ಮುಜರಾಯಿ ಇಲಾಖೆಯ ವತಿಯಿಂದ ಅರ್ಚಕರ ಸಮಾವೇಶ ಏರ್ಪಡಿಸುವಂತೆಯೂ ಸದಸ್ಯರು ಕೋರಿಕೆ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಏರ್ಪಡಿಸುವುದಾಗಿ ತಿಳಿಸಿದರು.

ತೆರವಾಗಿರುವ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರ ಸ್ಥಾನವನ್ನು ಶೀಘ್ರವಾಗಿ ತುಂಬುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಜರಾಯಿ ಇಲಾಖೆಯ ಶೇಕಡಾ 60 ರಷ್ಟು ಹುದ್ದೆಗಳು ಖಾಲಿಯಿವೆ. ಇದನ್ನು ತುಂಬಲು ನೇಮಕಾತಿಗೆ ಅವಕಾಶ ನೀಡುವಂತೆ ಆರ್ಥಿಕ ಇಲಾಖೆಗೆ ಪತ್ರಬರೆಯಲಾಗಿದೆ. ಇದರ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ತಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಪ್ರಮುಖ ಶ್ರದ್ದಾಕೇಂದ್ರ ಕುಕ್ಕೆಯಲ್ಲಿ ಭಕ್ತಾದಿಗಳಿಗೆ ಇನ್ನೂ ಹೆಚ್ಚಿನ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪರೀಶೀಲನೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಯಿತು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಕ್ರಮ ಕೈಗೊಳ್ಳುವಂತೆಯೂ ಹಾಗೂ ನೂತನ ಜಿಲ್ಲೆ ವಿಜಯನಗರದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್‌ ರಚನೆಗೆ ಕ್ರಮವಹಿಸುವಂತೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು.

ಕಾಶಿಯ ಕರ್ನಾಟಕ ಛತ್ರ ಸಂಪೂರ್ಣ ನವೀಕರಣ ಹಾಗೂ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ:
ಕಾಶಿಯಲ್ಲಿರುವ ಕರ್ನಾಟಕ ಛತ್ರವನ್ನು ಸಂಪೂರ್ಣ ನವೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಆಯುಕ್ತರಿಗೆ ಸೂಚನೆ ನೀಡಿದರು. ಅಲ್ಲದೇ, ಕೂಡಲೇ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಸಚಿವರು ಆದೇಶಿಸಿದರು.

ಸಭೆಯಲ್ಲಿ ರಾಜ್ಯಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಜರಾಯಿ ಇಲಾಖೆ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರುಗಳಾದ ಡಾ|| ಮಹರ್ಷಿ ಆನಂದ ಗುರೂಜಿ, ಎಸ್‌ ಗೋವಿಂದ ಭಟ್‌, ಕೆ. ಸೂರ್ಯ ಕಷೇಕೋಡಿ, ಸುಭಾಷ ಕಾಂಬ್ಳೆ, ರಾಮಚಂದ್ರ ಮಟ್ಟಿ, ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ, ವೈ.ಎಸ್‌. ಸಿದ್ದಲಿಂಗಪ್ರಭು ಹಾಗೂ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article