ಬೆಂಗಳೂರು,ಫೆ.25- ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‍ಗೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಳಗ್ಗೆ ಜಯಶಂಕರ್ ಜೊತೆ ದೂರವಾಣಿ ಜೊತೆ ಮಾತುಕತೆ ನಡೆಸಿ ಉಕ್ರೇನ್‍ನಲ್ಲಿ ಎಂಬಿಬಿಎಸ್ ಸೇರಿದಂತೆ ವಿವಿಧ ವ್ಯಾಸಂಗಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯಕ್ಕೆ ಅವರೆಲ್ಲರೂ ಸುರಕ್ಷಿತ ಸ್ಥಳದಲ್ಲಿ ಇರುವುದು ನೆಮ್ಮದಿ ತಂದಿದೆ ಎಂದರು. ಉಕ್ರೇನ್‍ನ ಪಶ್ಚಿಮ ಭಾಗದಲ್ಲಿ ರಾಜ್ಯದ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಮಾಹಿತಿ ಬಂದಿದೆ. ಅವರಿಗೆ ಊಟ, ನೀರು, ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಸದ್ಯಕ್ಕೆ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಕ್ರೇನ್‍ನಲ್ಲಿರುವ ಭಾರತದ ರಾಯಭಾರಿ ಅಧಿಕಾರಿಯನ್ನು ಸಹ ಸಂಪರ್ಕಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ನಂತರ ವಾಪಸ್ಸಾಗಲಿದ್ದಾರೆ ಎಂದು ಹೇಳಿದರು.
ಸದ್ಯ ಅಲ್ಲಿ ಎರಡು ರಾಷ್ಟ್ರಗಳ ನಡುವೆ ಯುದ್ದ ನಡೆಯುತ್ತಿರುವುದರಿಂದ ಸಹಜವಾಗಿ ಪೋಷಕರಿಗೆ ಆತಂಕವಾಗುತ್ತದೆ. ಕೇಂದ್ರ ಸರ್ಕಾರದ ಜೊತೆ ನಾವು ಕೂಡ ಸಹಾಯವಾಣಿಯನ್ನು ತೆರೆದಿದ್ದೇವೆ. ದಿನದ 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಮಾಹಿತಿಯನ್ನು ಇದರಿಂದ ಪಡೆಯಬಹುದು ಎಂದು ಮಾಹಿತಿ ನೀಡಿದರು.
ರಾಯಭಾರಿ ಕಚೇರಿಗಳು ಹೇಳುವ ತನಕ ವಿದ್ಯಾರ್ಥಿಗಳು ತಾವಿರುವ ಸ್ಥಳವನ್ನು ಬಿಟ್ಟು ಎಲ್ಲಿಯೂ ಹೋಗಬಾರದು. ಸದ್ಯಕ್ಕೆ ಉಕ್ರೇನ್‍ನಿಂದ ವಿಮಾನಗಳ ಹಾರಾಟ ಸಾಧ್ಯವಾಗುತ್ತಿಲ್ಲ. ಭೂ ಸಾರಿಗೆ ಮತ್ತು ಜಲಸಾರಿಗೆ ಮೂಲಕವು ಕರೆತರುವ ಪ್ರಯತ್ನ ನಡೆಯಲಿದೆ ಎಂದರು.
ಸರಿಯಾದ ಸಮಯ, ಪರಿಸ್ಥಿತಿ ನೋಡಿಕೊಂಡು ವಿದ್ಯಾರ್ಥಿಗಳು ಹೊರಬರಬೇಕು. ನಿಮ್ಮನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ. ರಾಜತಾಂತ್ರಿಕ ಅಧಿಕಾರಿಗಳ ಮೂಲಕ ನಾವು ಕೂಡ ಸಂಪರ್ಕದಲ್ಲಿದ್ದೇವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಬಾರದು. ಸರ್ಕಾರ ಎಲ್ಲ ಪ್ರಯತ್ನವನ್ನು ಮಾಡಲಿದೆ ಎಂದು ತಿಳಿಸಿದರು.
