ಸ್ವಾತಂತ್ರ್ಯ ನಡಿಗೆಗೆ ಕಾಂಗ್ರೆಸ್ ಅಂತಿಮ ಸಿದ್ಧತೆ

Social Share

ಬೆಂಗಳೂರು,ಆ.14- ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ವೇಳೆ ನಾಳೆ ಕಾಂಗ್ರೆಸ್ ಏಳೂವರೆ ಕಿ.ಮೀ ಉದ್ದದ ಸ್ವತಂತ್ರ ನಡಿಗೆಗೆ ಭರದ ಸಿದ್ದತೆ ಕೈಗೊಂಡಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ನಾಳೆ ಬೃಹತ್ ಪಾದಯಾತ್ರೆ ಆಯೋಜನೆಗೊಂಡಿದ್ದು, ಸುಮಾರು ಒಂದೂವರೆ
ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.

ಪಕ್ಷತೀತವಾಗಿ ಸಾರ್ವಜನಿಕರು ಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದ್ದು, ಭಾಗವಹಿಸಿದವರಿಗೆ ಟಿಶರ್ಟ್, ಕ್ಯಾಪ್ ಹಂಚಿಕೆ ಮಾಡಲು ತಯಾರಿ ನಡೆದಿವೆ. ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಪಾದಯಾತ್ರೆಯ ದಾರಿಯುದ್ದಕ್ಕೂ ನೀರು, ಮಜ್ಜಿಗೆ, ಹಣ್ಣಿನ ರಸ ವಿತರಣೆ ಮಾಡಲಾಗುವುದು. ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಫ್ಲೆಕ್ಸ್ , ಬ್ಯಾನರ್ಗಳನ್ನು ಅಳವಡಿಸುವ ಮೂಲಕ ಅಲಂಕರಿಸಲಾಗಿದೆ. ಸುಮಾರು ಒಂದೂವರೆ ಲಕ್ಷ ತ್ರಿವರ್ಣ ಧ್ವಜಗಳ ಹಂಚಿಕೆಯಾಗಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದ ಹೊರವಲಯದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಲಭ್ಯವಿರುವ ಮೆಟ್ರೋ ಭಾಗದಲ್ಲಿ ಜನರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಮತ್ತು ಮೆಜೆಸ್ಟಿಕ್ವರೆಗೆ ಪ್ರಯಾಣಿಸಲು ಕಾಂಗ್ರೆಸ್ ಉಚಿತ ಟಿಕೆಟ್ ವ್ಯವಸ್ಥೆ ಮಾಡಿದೆ.

ಈಗಾಗಲೇ ಒಂದು ಲಕ್ಷ ಟಿಕೆಟ್ಗೆ ಮೆಟ್ರೋಗೆ ಹಣ ಠೇವಣಿ ಮಾಡಿ ಕಾಂಗ್ರೆಸ್ ಪ್ರಯಾಣಕ್ಕೆ ಸಿದ್ದತೆ ಮಾಡಿದೆ. ಕಾರ್ಯಕರ್ತರು ಮೆಟ್ರೊನಿಲ್ದಾಣದಲ್ಲಿ ಹಾಜರಿದ್ದು, ಆಗಮಿಸುವವರಿಗೆ ಉಚಿತ ಟಿಕೆಟ್ ನೀಡಲಿದ್ದಾರೆ.ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸುವ ಹೊರ ಜಿಲ್ಲೆ ಜನರ ಅನುಕೂಲಕ್ಕೆ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ಹೊರ ವಲಯದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸುವ ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್, ಹುಬ್ಬಳ್ಳಿ ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳುರು, ಹಾಸನ, ಬಿಜÁಪುರ, ರಾಯಚೂರು, ವಿಜಯನಗರ (ಹೊಸಪೇಟೆ) ಶಿವಮೊಗ್ಗ ಜಿಲ್ಲೆಗಳ ಜನರು ಅಂತಾರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಬಳಿ ವಾಹನ ನಿಲುಗಡೆ ಮಾಡಿ ನಾಗಸಂದ್ರ ಮೆಟ್ರೋ ಸ್ಟೇಷನ್ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರು ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸುವ ರಾಮನಗರ (ಕನಕಪುರ ಹೊರತುಪಡಿಸಿ), ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಮೆಟ್ರೋ ಸ್ಟೇಷನ್ ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕನಕಪುರ ರಸ್ತೆ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕನಕಪುರ, ಮಳವಳ್ಳಿ, ಹನೂರು, ಕೊಳ್ಳೇಗಾಲ ಭಾಗದ ಜನರಿಗೆ ಕನಕಪುರ ರಸ್ತೆ ನೈಸ್ ಜಕ್ಷನ್ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಕೊಣನಕುಂಟೆ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ.

ಕೆ.ಆರ್ ಪುರಂ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕೋಲಾರ, ಹೊಸಕೋಟೆ, ಚಿಂತಾಮಣಿ ಭಾಗದ ಜನರಿಗೆ ಐ.ಟಿ.ಐ. ಗೌಂಡ್ಸ್ ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಭೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಜನರಿಗೆ ಯಶವಂತಪುರದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹೀಗೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಆಯಾ ಮಾರ್ಗವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದು ಸಮೀಪದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಾದಯಾತ್ರೆ ಸೇರಿಕೊಳ್ಳಬೇಕು ಎಂದು ಕಾಂಗ್ರೆಸ್ ಸಲಹೆ ನೀಡಿದೆ. ಪಾದಯಾತ್ರೆ ನಂತರ ವಾಪಸ್ ತೆರಳಲು ಕೂಡ ಉಚಿತ ಟಿಕೆಟ್ ನೀಡಲಾಗುವುದು ಎಂದು ತಿಳಿಸಲಾಗಿದೆ.

Articles You Might Like

Share This Article