ದೆಹಲಿ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಪರ್ವ

ಬೆಂಗಳೂರು, ಫೆ.8- ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಆಯ್ಕೆ ದೆಹಲಿ ವಿಧಾನಸಭೆ ಚುನಾವಣೆ ಬಳಿಕ ನಡೆಯುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನೀಡಿರುವ ಕೆಲವು ನಾಯಕರು ಅಂತಿಮ ಘಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಲಾಬಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ರಾಜ್ಯ ನಾಯಕರಿಗೆ ಲಭ್ಯವಾಗುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.

ಅಹಮದ್ ಪಟೇಲ್, ಗುಲಾಂ ನಬಿ ಆಜಾದ್ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಕೆಲವು ನಾಯಕರು ಪ್ರಯತ್ನಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಹೈಕಮಾಂಡ್ ಆಸಕ್ತಿ ತೋರಿಸಿದೆ. ಆದರೆ ಅಂತಿಮ ಹಂತದಲ್ಲಿ ಲಾಬಿ ನಡೆಸುತ್ತಿರುವ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ ಮತ್ತಿತರರ ಹೆಸರುಗಳು ಪರಿಶೀಲನೆಯಲ್ಲಿವೆ.

ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ದಿನೇಶ್ ಗುಂಡುರಾವ್ ಅವರನ್ನೇ ಮುಂದುವರೆಸಬೇಕು ಎಂಬ ಒತ್ತಡವೂ ಕೇಳಿ ಬರುತ್ತಿದೆ. ಪಕ್ಷದ ಅಧ್ಯಕ್ಷ ಸ್ಥಾನ ಸಿಗದೆ ನಿರಾಶರಾಗುವ ಪ್ರಭಾವಿ ನಾಯಕರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಣೆ ಹಾಕಿ ಸಮಾಧಾನ ಪಡಿಸುವ ಸಾಧ್ಯತೆಗಳಿವೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಪರಿಶೀಲಿಸಿ ನಿರ್ಧಾರ ಪ್ರಕಟಿಸಲಿರುವ ಹೈಕಮಾಂಡ್ ರಾಜ್ಯ ನಾಯಕರ ಒತ್ತಡದಂತೆ ವಿರೋಧ ಪಕ್ಷದ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡನ್ನು ಪ್ರತ್ಯೇಕಗೊಳಿಸುವ ಸಾಧ್ಯತೆಗಳಿವೆ.

ಆದರೆ ಹುದ್ದೆಗಳನ್ನು ಪ್ರತ್ಯೇಕಗೊಳಿಸದಂತೆ ಸಿದ್ದರಾಮಯ್ಯ ತಮ್ಮ ಆಪ್ತ ವಲಯದ ಮೂಲಕ ಸಾಕಷ್ಟು ಲಾಭಿ ನಡೆಸಿದ್ದಾರೆ. ಹೈಕಮಾಂಡ್ ನಿರ್ಧಾರ ಪ್ರಕಟಸಿದ ಬಳಿಕ ಮೂಲ ಕಾಂಗ್ರೆಸಿಗರ ಕೈ ಮೇಲಾಗಿದೆಯೋ ಅಥವಾ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆಯೋ ಎಂದು ತಿಳಿದು ಬರಲಿದೆ. ಉಳಿದಂತೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಸೇರಿದಂತೆ ಇತರ ನಾಯಕರನ್ನು ಯಾವ ರೀತಿ ಸಮಾದಾನ ಪಡಿಸಲಾಗುತ್ತದೆ ಎಂಬ ಕುತೂಹಲಗಳು ಹೆಚ್ಚಾಗಿವೆ.

ಲೋಸಕಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲಾ ನಾಯಕರು ಒಂದೇ ಕಡೆ ಲಭ್ಯವಾಗುವುದರಿಂದ ಲಾಬಿ ನಡೆಸಲು ಕೆಲ ನಾಯಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ನಾಳೆ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಅನಂತರದ ಬೆಳವಣಿಗಳು ತೀವ್ರ ಕುತೂಹಲ ಕೆರಳಿಸಿದೆ. ಕೆಪಿಸಿಸಿ ಕಾರ್ಯಧ್ಯಕ್ಷರ ನೇಮಕಕ ಕುರಿತು ಈಗಾಗಲೇ ತೀರ್ಮಾನವಾಗಿದ್ದು, ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.