ನಿಮ್ಮ ದರ್ಪಕ್ಕೆ ನೌಕರರು ಹೆದರಬೇಕೆ..? : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಏ.7- ಕಳೆದ ಡಿಸೆಂಬರ್‍ನಿಂದಲೂ ಬೇಡಿಕೆ ಈಡೇರಿಸದೆ ಇರುವ ರಾಜ್ಯ ಸರ್ಕಾರ ಈಗ ನೀತಿ ಸಂಹಿತೆಯ ನೆಪ ಹೇಳುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಸಾರಿಗೆ ಮುಷ್ಕರಕ್ಕೆ ಸಂಬಂಧಪಟ್ಟಂತೆ ಟ್ವಿಟರ್‍ನಲ್ಲಿ ಪ್ರತಿಕಿಯೆ ನೀಡಿರುವ ಕಾಂಗ್ರೆಸ್ ಉಪ ಚುನಾವಣೆಗಳ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳುತ್ತಿದ್ದಾರೆ. ಕಳೆದ ಡಿಸೆಂಬರ್‍ನಿಂದಲೂ ನೀತಿ ಸಂಹಿತೆ ಜಾರಿಯಲ್ಲಿತ್ತೆ ಎಂದು ಪ್ರಶ್ನಿಸಿದೆ.

ನಿಮ್ಮ ದರ್ಪ, ದಾಷ್ಠ್ಯಕ್ಕೆ ಸಾರಿಗೆ ನೌಕರರು ಹೆದರಬೇಕೆ ? ಸಾರ್ವಜನಿಕರು ಪರದಾಡಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಾರಿಗೆ ನೌಕರರು ಡಿಸೆಂಬರ್‍ನಿಂದಲೂ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಾ ಬಂದಿದ್ದಾರೆ. ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯತೆ ವಹಿಸಿದ ಪರಿಣಾಮ ಈಗ ಮುಷ್ಕರ ನಡೆಯುತ್ತಿದೆ. ಸಾರ್ವಜನಿಕರು ಪರದಾಡಬೇಕಿದೆ. ಸಿಡಿ ಸರ್ಕಾರ ಸಾರಿಗೆ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.