ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚುತ್ತಿದೆ: ಕಾಂಗ್ರೆಸ್

ಬೆಂಗಳೂರು, ಮೇ 17-  ಕೊರೊನಾ ಕುರಿತಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮರೆ ಮಾಚಲು ಅಪಾಯಕಾರಿ ಮಾರ್ಗಗಳನ್ನು ಹಿಡಿದಿದೆ ಎಂದು ಆರೋಪಿಸಿದೆ. ಸೋಂಕು ಹೆಚ್ಚಿರುವ 10 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇ.38ರಷ್ಟಿದ್ದರೂ ಪರೀಕ್ಷೆ ಮಾಡುವ ಪ್ರಮಾಣವನ್ನು ಕಡಿತಗೊಳಿಸಿ ಸೋಂಕು ತಗ್ಗುತ್ತಿದೆ ಎಂದು ಜನರ ಕಣ್ಣಿಗೆ ಮಣ್ಣೆರೆಚುತ್ತಿದೆ.

ಇದನ್ನು ನಂಬಲು ಜನ ಮೂರ್ಖರಲ್ಲ. ಪರೀಕ್ಷೆ ಪ್ರಮಾಣವನ್ನು ವ್ಯಾಪಕಗೊಳಿಸಿ ಸೋಂಕಿತರನ್ನು ಗುರುತಿಸಿ ವರ್ಗಿಕರಿಸದ ಹೊರತು ಸೋಂಕು ನಿಯಂತ್ರಣಕ್ಕೆ ಬರುವುದಿಲ್ಲ ವಾಸ್ತವವನ್ನು ಅರ್ಥ ಮಾಡಿಕೊಂಡು ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಸತ್ಯ ಮರೆ ಮಾಚುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದೆ.

ಇನ್ನೂ ಸೋಂಕಿನ ವಿಚಾರದಲ್ಲೂ ಗೊಂದಲ ಮೂಡಿಸಲಾಗಿದೆ. ಶೇ.82ರಷ್ಟು ಅಂದರೆ 4.22 ಕೋಟಿ ಜನಕ್ಕೆ ಲಸಿಕೆ ಸಿಕ್ಕಿಲ್ಲ 66.40 ಲಕ್ಷ ಜನರಿಗೆ 2ನೇ ಡೋಸ್ ಬಾಕಿ ಇದೆ. ಶೇ.50ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿಲ್ಲ. ರಾಜ್ಯಕ್ಕೆ 9.12 ಕೋಟಿ ಲಸಿಕೆ ಬೇಕಿದೆ, ಆದರೆ ಎಷ್ಟು ಲಭ್ಯತೆ ಇದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಬಿಜೆಪಿಯ ಭ್ರಷ್ಟಾಚಾರದೊಂದಿಗೆ ಬೆಡ್‌ಗಳ ಅಂಕಿ ಸಂಖ್ಯೆಗಳ ಗೋಲ್ಮಾಲ್ ಹಾಗೂ ಸೋಂಕಿತರ ಪರದಾಟ ಇನ್ನೂ ಮುಂದುವರಿದಿದೆ. ಗುಡ್ಡ ಅಗೆದು ಇಲಿ ಹಿಡಿಯಲು ಹೊರಟಿದ್ದ ಎಳೆಸಂಸದನಿಗೆ ಇಲಿಯ ಬಾಲವೂ ಸಿಗಲಿಲ್ಲ. ಎಡವಟ್ಟುಗಳಿಂದ ಕೂಡಿದ ಸಾಫ್ಟ್‌ವೇರ್ ಬದಲಿಸಿದ್ದೇ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕರ್ನಾಟಕ ಕೊರೊನಾದಿಂದ ಸಂಕಷ್ಟದಲ್ಲಿರುವಾಗ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು 847 ಕೋಟಿ ರೂಪಾಯಿಗಳ ಬಾಕಿ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ನಯವಾದ ದಮಕಿ ಹಾಕಿದ್ದಾರೆ. GST ಬಾಕಿ, ನೆರೆ ಪರಿಹಾರ, ಪಿಎಂ ಕೇರ್ಸ್ ಹಣ, 15ನೇ ಹಣಕಾಸು ಆಯೋಗದ ಬಾಕಿಯನ್ನೂ ಇದೇ ಧಾಟಿಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ ಕೇಳಬೇಕಿತ್ತು.

ಈ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. 25 ಸಂಸದರು ಸಂಸತ್ತಿನ ಕುರ್ಚಿ ತುಂಬಲಷ್ಟೇ ಇದ್ದಾರೆ. ಅವರಿಂದ ರಾಜ್ಯಕ್ಕೆ ಏನೂ ಆಗುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೀವೇ ಕೇಳಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.