ಇತ್ತ ಸರ್ಕಾರ ಅಲ್ಲಾಡುತ್ತಿದ್ದರೆ, ಅತ್ತ ಕೆಲವರಿಗೆ ಸಚಿವರಾಗೋ ಆಸೆ..!

ಬೆಂಗಳೂರು, ಜು.2-ಕಾಂಗ್ರೆಸ್‍ನಲ್ಲಿ ಶಾಸಕರ ರಾಜೀನಾಮೆ ಪರ್ವದ ಸುದ್ದಿಯೇ ಚರ್ಚೆಯಾಗುತ್ತಿದ್ದು, ಈ ಸಂದರ್ಭದಲ್ಲೇ ಕೆಲವು ಶಾಸಕರು ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಭರ್ತಿಯಾಗಿದ್ದು, ಕಾಂಗ್ರೆಸ್ ಪಾಲಿನ ಯಾವ ಸ್ಥಾನಗಳೂ ಖಾಲಿ ಇಲ್ಲ. ಆದರೆ ಶಾಸಕರ ರಾಜೀನಾಮೆ ಪರ್ವ ಹೆಚ್ಚಾದರೆ ಸಂಪುಟ ಪುನಾರಚನೆಗೆ ಕೈ ಹಾಕಿ ಅತೃಪ್ತರನ್ನು ಸಮಾಧಾನಪಡಿಸಲು ಹೊಸದಾಗಿ ಒಂದಷ್ಟು ಮಂದಿಗೆ ಸಚಿವ ಸ್ಥಾನ ನೀಡಬೇಕಿದೆ.

ಈ ಸಂದರ್ಭದಲ್ಲೇ ಬಹಳಷ್ಟು ಮಂದಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಹಿರಿಯ ಶಾಸಕರಾದ ತನ್ವೀರ್‍ಸೇಠ್, ಬಿ.ಸಿ.ಪಾಟೀಲ್, ವಿ.ಮುನಿಯಪ್ಪ, ರಾಮಲಿಂಗಾರೆಡ್ಡಿ, ನಾಗೇಂದ್ರ ಸೇರಿದಂತೆ ಅನೇಕರು ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ.

ಮೈಸೂರಿನಲ್ಲಿಂದು ಮಾತನಾಡಿರುವ ಶಾಸಕ ತನ್ವೀರ್‍ಸೇಠ್ ಸಚಿವ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಮ್ಮಿಶ್ರ ಸರ್ಕಾರವೇ ಪತನವಾಗುವ ಪರಿಸ್ಥಿತಿ ಇದೆ. ಅಂತಹ ಸಂದರ್ಭದಲ್ಲಿ ಶಾಸಕರು ಸಚಿವ ಸ್ಥಾನದ ಕನಸು ಕಾಣುತ್ತಿರುವುದು ಹಾಸ್ಯಾಸ್ಪದವಾಗಿದೆ.