BIG NEWS : ಮತ್ತೊಂದು ಬೃಹತ್ ಅಕ್ರಮದ ಬಾಂಬ್ ಸಿಡಿಸಿದ ಕಾಂಗ್ರೆಸ್..!

Social Share

ಬೆಂಗಳೂರು, ನ.17- ರಾಜ್ಯ ಸರ್ಕಾರದ ಹಲವಾರು ಭ್ರಷ್ಟಾಚಾರಗಳ ಬಗ್ಗೆ ಧ್ವನಿ ಎತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಂದು ಬೃಹತ್ ಅಕ್ರಮವನ್ನು ಬಯಲಿಗೆಳೆದಿದ್ದು, ಈ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಬಂಸಬೇಕು ಎಂದು ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ತುರ್ತು ಜಂಟಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರ ನಾಯಕರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಚುನಾವಣಾ ಭ್ರಷ್ಟಾಚಾರ ನಡೆದಿದ್ದು, ಭಾರಿ ಅಕ್ರಮಗಳಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುರ್ಜೇವಾಲ ಅವರು ಮಾತನಾಡಿ ಬಿಬಿಎಂಪಿ ಚುನಾವಣೆಯ ಪೂರ್ವ ತಯಾರಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಕ್ರಮ ಕೈಗೊಂಡಿದೆ.ಆಯೋಗ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಈ ಕೆಲಸ ಮಾಡಬೇಕಿತ್ತು. ಆದರೆ ಮಲ್ಲೇಶ್ವರಂನಲ್ಲಿರುವ ಚಿಲುಮೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮತದಾರರ ಜಾಗೃತಿ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡಿಕೊಡುವುದಾಗಿ ತಿಳಿಸಿದೆ. ಅದರಂತೆ ರಾಜ್ಯ ಚುನಾವಣಾ ಆಯೋಗ, ಬಿಬಿಎಂಪಿ ಆಯುಕ್ತರು ಈ ಸಂಸ್ಥೆಗೆ ಜವಾಬ್ದಾರಿ ನೀಡಿದ್ದಾರೆ ಎಂದರು.

ಚಿಲುಮೆ ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್ ಎಂಬುವವರಿಗೆ ಸೇರಿದ್ದು ಇವರು ಡಿಎಪಿ ಹೊಂಬಾಳೆ ಪ್ರೈವೆಟ್ ಲಿಮಿಟೆಡ್ ಮಾಲೀಕರು ಆಗಿದ್ದಾರೆ. ಸಚಿವ ಅಶ್ವಥ್‍ನಾರಾಯಣ ಇವರ ಹುಟ್ಟುಹಬ್ಬದಲ್ಲಿ ಭಾಗವಹಿಸಿರುವ ಫೋಟೋಗಳು ಲಭ್ಯ ಇವೆ ಎಂದು ದಾಖಲೆ ಬಿಡುಗಡೆ ಮಾಡಿದರು.

ಚಿಲುಮೆ ಸಂಸ್ಥೆ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರನ್ನು ಬೂತ್ ಮಟ್ಟದ ಅಕಾರಿಯನ್ನಾಗಿ (ಬಿಎಲ್‍ಒ) ಮತಗಟ್ಟೆ ಅಕಾರಿಗಳೆಂದು ನೇಮಿಸಿಕೊಂಡು ಗುರುತಿನ ಕಾರ್ಡ್ ನೀಡಿದೆ. ಈ ರೀತಿ ಕಾರ್ಡ್ ಪಡೆದವರು ಮನೆ ಮನೆಗೆ ತೆರಳಿ ಮತದಾರರ ಹೆಸರು, ಜಾತಿ ಹಾಗೂ ಇತರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ತಮ್ಮದೇ ಸ್ವಂತ ಖಾಸಗಿ ಆಪ್ ಮೂಲಕ ಅದನ್ನು ಚುನಾವಣಾ ಆಯೋಗಕ್ಕೆ ಅಪ್‍ಲೋಡ್ ಮಾಡಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತೆಗೆದುಹಾಕುವ ಪರಿಷ್ಕರಣಾ ಜವಾಬ್ದಾರಿಯನ್ನು ಆಗಸ್ಟ್ ತಿಂಗಳಿನಿಂದಲೂ ನಿರ್ವಹಿಸಲಾಗಿದೆ ಎಂದು ವಿವರಿಸಿದರು.

ಬಿಎಲ್‍ಒ ಗಳಿಗೆ ಚಿಲುಮೆ ಸಂಸ್ಥೆ ದಿನವೊಂದಕ್ಕೆ 1500 ರೂಪಾಯಿಯಂತೆ ವೇತನ ನೀಡುವುದಾಗಿ ಜಾಹೀರಾತು ನೀಡಿತ್ತು. ಹೆಸರಿಗಷ್ಟೇ ನೇಮಕಾತಿ ನಡೆಸಿದ್ದು, ಇವರು ಗುರುತಿನ ಕಾರ್ಡ್ ನೀಡುವವರಲ್ಲ. ಇವರು ಬಿಜೆಪಿಯ ಕಾರ್ಯಕರ್ತರು ಎಂದು ಆರೋಪಿಸಿದರು.

ಸಿದ್ದರಾಮಯ್ಯ ನವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಅಲ್ಪಸಂಖ್ಯಾತರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮತದಾರರ ಹೆಸರುಗಳನ್ನು ಯಾವುದೇ ಪೂರ್ವ ಮಾಹಿತಿ ನೀಡದೆ ಡಿಲೀಟ್ ಮಾಡಲಾಗಿದೆ. ಮನೆ ಮನೆ ಸಮೀಕ್ಷೆಯ ವೇಳೆ ಬಿಜೆಪಿ ಹೊರತಾಗಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಬೇರೆ ಕ್ಷೇತ್ರಗಳಿಗೆ ಸ್ಥಳಾಂತರಿಸಲಾಗಿದೆ.

ರಾತ್ರೋರಾತ್ರಿ ಬದಲಾಯ್ತು ವಿವಾದಿತ ಗುಂಬಜ್ ಆಕಾರದ ಬಸ್ ನಿಲ್ದಾಣದ ಬಣ್ಣ

ಪ್ರತಿ ಕ್ಷೇತ್ರದಲ್ಲೂ ಈ ರೀತಿ ಸಾವಿರಾರು ಮತದಾರರ ಹೆಸರನ್ನು ತೆಗೆದುಹಾಕುವುದು ಮತ್ತು ಸ್ಥಳಾಂತರಿಸುವ ಕೆಲಸ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ ಮತ್ತು ಜನ ಪ್ರಾತಿನಿಧ್ಯ ಕಾಯ್ದೆ ಅನುಸಾರ ಮತದಾರರ ಪಟ್ಟಿಯನ್ನು ಸರ್ಕಾರಿ ನೌಕರರು ಮತ್ತು ಅರೆ ಸರ್ಕಾರಿ ನೌಕರರು ಮಾತ್ರ ನಿರ್ವಹಣೆ ಮಾಡಬೇಕು. ಖಾಸಗಿ ವ್ಯಕ್ತಿಗಳು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.

ಈ ಹಗರಣ ಮತ್ತು ಸಂಚಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಕಾರಿಯೂ ಆಗಿರುವ ತುಷಾರ್ ಗಿರಿನಾಥ್ ಹಾಗೂ ಚುನಾವಣಾ ಆಯೋಗ ಶಾಮೀಲಾಗಿದೆ ಎಂದು ಆರೋಪಿಸಿದರು.

ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಸಬೇಕು. ಬೆಂಗಳೂರು ಉಸ್ತುವಾರಿ ಆಗಿರುವ ಸಚಿವರು ಹಾಗೂ ಮುಖ್ಯಮಂತ್ರಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕೇಂದ್ರ ಚುನಾವಣೆ ಆಯೋಗ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ನೇರ ಉಸ್ತುವಾರಿಯಲ್ಲಿ ಹಗರಣದ ತನಿಖೆ ನಡೆಸಬೇಕು.

ಖಾಸಗಿ ಸಂಸ್ಥೆಯಿಂದ ನೇಮಕವಾಗಿರುವ ಬೂತ್ ಮತಗಟ್ಟೆ ಅಧಿಕಾರಿಗಳನ್ನು ಕೂಡ ಬಂಸಬೇಕು. ಖಾಸಗಿ ಸಂಸ್ಥೆ ಸಂಗ್ರಹಿಸಿರುವ ದತ್ತಾಂಶಗಳನ್ನು ಕೂಡಲೇ ಹಿಂಪಡೆದುಕೊಳ್ಳಬೇಕು. ಬಿಬಿಎಂಪಿ ಆಯುಕ್ತರು ಸಕಾರಣ ನೀಡದೇ ಚಿಲುಮೆ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ಎರಡು ದಿನಗಳ ಹಿಂದಷ್ಟೇ ರದ್ದುಪಡಿಸಿರುವ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ವಲಸಿಗರ ಸೇರಿಸುವ ಕುರಿತು TMC ಶಾಸಕ ವಿವಾದಿತ ಹೇಳಿಕೆ

ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಬಿಜೆಪಿಗೆ ನೇರವಾಗಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ವಾಮಮಾರ್ಗವನ್ನು ಅನುಸರಿಸಿದೆ. ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಹಿಸಿಕೊಳ್ಳುವ ಪ್ರಸ್ತಾವನೆ ಸಲ್ಲಿಸುವ ವೇಳೆ ಚಿಲುಮೆ ಸಂಸ್ಥೆ ಮತ ಯಂತ್ರಗಳನ್ನು ನಿಭಾಯಿಸುವ ಪರಿಣಿತಿ ಹೊಂದಿರುವುದಾಗಿ ಹೇಳಿಕೊಂಡಿದೆ. ಮತಯಂತ್ರಗಳನ್ನು ನಿಭಾಯಿಸುವುದು ಎಂದರೆ ಏನು? ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಮತದಾರರ ಜಾಗೃತಿ, ಮತದಾರರ ಪಟ್ಟಿ ಪರಿಷ್ಕರಣೆ, ದತ್ತಾಂಶ ಸಂಗ್ರಹ ಕೆಲಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ಚಿಲುಮೆ ಸಂಸ್ಥೆ ಹೇಳಿತ್ತು. ಆದರೆ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ರ್ಪಸುವ ಆಕಾಂಕ್ಷೆ ಹೊಂದಿರುವ ಬಿಜೆಪಿ ಅಭ್ಯರ್ಥಿಗಳನ್ನು ಗುರುತಿಸಿ ಅವರಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಅವರ ಗೆಲುವಿಗೆ ಅನುಕೂಲವಾಗುವಂತೆ ದಲಿತರು, ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅನ್ಯ ಪಕ್ಷಗಳ ಮತದಾರರನ್ನು ಬೇರಡೆಗೆ ಸ್ಥಳಾಂತರಿಸುವ ಮೂಲಕ ಗೊಂದಲ ಮೂಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಚಿಲುಮೆ ಸಂಸ್ಥೆ ಸುಮಾರು ಎಂಟು ಸಾವಿರ ಬಿಎಲ್‍ಒಗಳನ್ನು ನೇಮಿಸಿಕೊಂಡು ಕಾರ್ಡ್ ನೀಡಿದೆ. ರಾಜ್ಯಾದ್ಯಂತವೂ ಈ ರೀತಿಯ ಪರಿಷ್ಕರಣೆ ಮಾಡುವ ಹುನ್ನಾರ ನಡೆದಿದೆ. ಮೂಲಗಳ ಪ್ರಕಾರ ಸುಮಾರು 27 ಲಕ್ಷ ಮತದಾರರ ಹೆಸರುಗಳು ಡಿಲಿಟ್ ಆಗಿರುವ ಸಾಧ್ಯತೆ ಇದೆ ಎಂದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಆರು ಸಾವಿರ ಮತಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಪೂರ್ವ ಮಾಹಿತಿ ನೀಡದೇ ಹಲವಾರು ಹೆಸರುಗಳನ್ನು ಡಿಲಿಟ್ ಮಾಡಿದ್ದಾರೆ. ಎಲ್ಲವೂ ಬಿಬಿಎಂಪಿಯ ಅಕಾರಿಗಳ ಗಮನಕ್ಕೆ ಬಂದ ನಂತರ ನಡೆದಿದೆ ಎಂದರು.

ರಾಮಲಿಂಗಾರೆಡ್ಡಿ ಮಾತನಾಡಿ, ಈ ಹಿಂದೆ ಬಿಬಿಎಂಪಿ ಕ್ಷೇತ್ರ ಪುನರ್‍ವಿಂಗಡಣೆಯಲ್ಲಿ ಬಿಜೆಪಿ ಅಕ್ರಮ ಮಾಡಿದ್ದು, ಈಗ ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಅವ್ಯವಹಾರ ಮಾಡಿದೆ. ಈ ರೀತಿಯ ಹಿಂಬಾಗಿಲ ರಾಜಕಾರಣ ಅಕ್ರಮಗಳು ಬಿಜೆಪಿಗೆ ಹೊಸದಲ್ಲ ಎಂದರು.

ಕಾಂಗ್ರೆಸ್ ಈ ಹಗರಣದ ಕುರಿತು ಚುನಾವಣಾ ಆಯೋಗ ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಕೂಡಲೇ ತಪ್ಪಿತಸ್ಥರನ್ನು ಬಂಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಹೋರಾಟಗಳನ್ನು ಕಾಂಗ್ರೆಸ್ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲಿಂ ಅಹಮದ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಶಾಸಕರಾದ ರಿಜ್ವಾನ್ ಅರ್ಷದ್, ದಿನೇಶ್ ಗುಂಡೂರಾವ್ ಮತ್ತಿತರರಿದ್ದರು.

Articles You Might Like

Share This Article