ಬೆಂಗಳೂರು,ಸೆ.4- ತರಕಾರಿ ಬೆಲೆಗಳ ಏರಿಕೆ ನಿಯಂತ್ರಿಸಲು ಟಾಪ್ ಪ್ರೈಸ್ ಫಂಡ್ ನಿಗದಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ಈವರೆಗೂ ಅದನ್ನು ಈಡೇರಿಸದಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಿಮ್ಮ ಬಳಿ ಉತ್ತರ ಇದೆಯಾ ಬಿಜೆಪಿ ಎಂಬ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ದಿನಕ್ಕೊಂದು ಪ್ರಶ್ನೆ ಕೇಳುತ್ತಿದ್ದು, ಅದರ ಭಾಗವಾಗಿ ಈ ತರಕಾರಿಗಳ ಬೆಲೆಗಳ ಕುರಿತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಾಪ್ ಪ್ರೈಸ್ ಫಂಡ್ ಸ್ಥಾಪಿಸುವ ಭರವಸೆ ನೀಡಿತ್ತು.
ಈಗ ರಾಜ್ಯದಲ್ಲಿ ತರಕಾರಿ ಬೆಲೆಗಳು ಟಾಪ್‍ನಲ್ಲಿವೆ. ಬಿಜೆಪಿಗೆ ತನ್ನ ಮಾತು ಮರೆತುಹೋಗಿದೆ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ಭವಣೆ ಬಿಜೆಪಿಗೆ ಕಾಣುತ್ತಿಲ್ಲವೇ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಒತ್ತಡಕ್ಕೆ ಒಳಗಾಗಿರುವ ಸಾಮಾನ್ಯರು ದೈನಂದಿನ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಪರದಾಡುವಂತಾಗಿದೆ. ಬಿಜೆಪಿ ಚುನಾವಣೆಗೂ ಮೊದಲು 600 ಭರವಸೆಗಳನ್ನು ನೀಡಿತ್ತು. ಆದರೆ ಅದರಲ್ಲಿ ಶೇ.10ರಷ್ಟನ್ನು ಮಾತ್ರ ಈಡೇರಿಸಿದೆ.
ಉಳಿದ 90ರಷ್ಟನ್ನು ಕಡೆಗಣಿಸಿ ಜನರಿಗೆ ವಂಚನೆ ಮಾಡಿದೆ ಎಂದು ಪಕ್ಷ ಆರೋಪಿಸಿದ್ದು, ದಿನಕ್ಕೊಂದು ಪ್ರಶ್ನೆಗಳನ್ನು ಕೇಳಲಾರಂಭಿಸಿದೆ.