ಬೆಂಗಳೂರು, ಜು.29- ಅಕ್ಷನ್‍ಗೆ ರಿಯಾಕ್ಷನ್ ಎನ್ನುವ ಮೂಲಕ ಕ್ರಿಮಿನಲ್‍ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಮುಖ್ಯಮಂತ್ರಿ ಅವರು ತಮ್ಮಲ್ಲಿನ ತಣ್ಣನೆಯ ಕ್ರೌರ್ಯ ತೋರಿಸಿದರು. ಅದರ ಪರಿಣಾಮ ಈಗ ಜನಾಕ್ರೋಶ ಎದುರಿಸುವಂತಾಗಿದ್ದು, ಒಟ್ಟಾರೆ ರಾಜ್ಯದಲ್ಲಿ ಬೊಮ್ಮಾಯಿ ಮಾಡೇಲ್ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ದಕ್ಷಿಣ ಕನ್ನಡದಲ್ಲಿ ಸರಣಿ ಹತ್ಯೆಗಳ ಬೆನ್ನಲ್ಲೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಸರ್ಕಾರದ ವಿರುದ್ಧ ಹರಿ ಹಾಯ್ದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜನಾಕ್ರೋಶವನ್ನು ತಣಿಸುವ ಸಲುವಾಗಿ ಯೋಗಿ ಮಾಡೆಲ್ ತರುತ್ತೇವೆ ಎನ್ನುತ್ತಿದ್ದಾರೆ. ಈ ಮೂಲಕ ತಮ್ಮ ಆಡಳಿತ ವಿಫಲವಾಗಿದೆ. ಬೊಮ್ಮಾಯಿ ಮಾಡೆಲ್ ಜನಾಕ್ರೋಶಕ್ಕೆ ತುತ್ತಾಗಿದೆ ಎಂದು ಎಂದು ಒಪ್ಪಿಕೊಂಡಂತಾಗಿದೆ ಎಂದು ಟೀಕಿಸಲಾಗಿದೆ.
ಕರ್ನಾಟಕದಲ್ಲಿ ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣ ಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ. ಇವುಗಳನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎನ್ನುವ ಬಸವರಾಜ ಬೊಮ್ಮಾಯಿ ಅವರೇ ಇದರರ್ಥ ಇಲ್ಲಿನ ಯುವಕರನ್ನು ಪರರಾಜ್ಯಗಳಿಗೆ ಪಾನಿಪುರಿ ಮಾರಲು ಕಳಿಸುವುದೇ. ಜನಾಕ್ರೋಶಕ್ಕೆ ಬೊಮ್ಮಾಯಿ ಮಾಡೆಲ್ ಛಿದ್ರವಾಯಿತೆ ಎಂದು ಲೇವಡಿ ಮಾಡಿದೆ.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜೆಸ್ವಿ ಸೂರ್ಯ, ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂಬ ವಿವಾದಿತ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಈ ಹಿಂದೆ ಕಾಂಗ್ರೆಸ್ ಸರ್ಕಾರ ವಿದ್ದಾ ಕಲ್ಲು ಹೊಡೆದು, ಸಾರ್ವಜನಿಕ ಆಸ್ತಿಗಳನ್ನು ಹಾಳುಗೆಡವಿದ ಭವ್ಯ ಇತಿಹಾಸವನ್ನು ಬಿಜೆಪಿ ಹೊಂದಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ.
ಅಂದು ಕಾಂಗ್ರೆಸ್ ಸರ್ಕಾರ ಬುಲ್ಡೋಸರ್ ಹತ್ತಿಸಿದ್ದರೆ ಇಂದು ಈ ಸಮಾಜಘಾತುಕರು ಚಿಗುರುತ್ತಿರಲಿಲ್ಲ. ಆದರೆ ನಾವು ಸಂವಿಧಾನದ ವಿರುದ್ಧ ವರ್ತಿಸುವ ತಪ್ಪು ಮಾಡಲಿಲ್ಲ. ಈಗ ಅವರ ವಿರುದ್ಧವೇ ಜನಾಕ್ರೋಶದ ಕಲ್ಲುಗಳು ಬೀಳುತ್ತಿವೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ, ಹೋದ ಜೀವಗಳಿಗೆ ಹಣ ಪರ್ಯಾಯವೇ? ಹೆಣಗಳ ಮೇಲೆ ಹಣ ಸುರಿದು ಬರುವುದು, ಆ ಹೆಣಗಳ ಹೆಸರಲ್ಲಿ ಮತ ಕೇಳುವುದು ನಂತರ ಮತ್ತೊಂದು ಹೆಣಕ್ಕಾಗಿ ಕಾಯುವುದು ಬಿಜೆಪಿಯ ಚಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಡವರ ಮನೆಯ ಮಕ್ಕಳನ್ನು ಪ್ರಚೋದಿಸಿ, ಬೀದಿಗಿಳಿಸಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬಿಜೆಪಿ ನಾಯಕರಿಗೆ ಮೃತಪಟ್ಟ ಯುವಕರ ಮನೆಯ ಹೆಣ್ಣುಮಗಳ ಆಕ್ರಂದನ ಅರ್ಥವಾಗುವುದೆಂದು? ಹೆಣ ರಾಜಕೀಯ ಬಿಡುವುದೆಂದು ಎಂದು ಪ್ರಶ್ನಿಸಿದ್ದಾರೆ.