ಬಳ್ಳಾರಿ ಜನತೆಗೆ ಕಾಂಗ್ರೆಸ್ ಮಾಡಿದ ದ್ರೋಹ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಅ.15-ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರು ಯಾವ ಮುಖ ಇಟ್ಟುಕೊಂಡು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಇದೇ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಬಳಿಕ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದರು. ಗೆದ್ದ ಮೇಲೆ ಸೌಜನ್ಯಕ್ಕಾದರೂ ಜಿಲ್ಲೆಗೆ ಬಂದಿದ್ದರಾ? ಎಂದು ಪ್ರಶ್ನಿಸಿದರು.

ಬಳ್ಳಾರಿಯಿಂದ ಗೆದ್ದು ಹೋದ ಮೇಲೆ ಸೌಜನ್ಯಕ್ಕಾದರೂ ಬಳ್ಳಾರಿ ಜನತೆಗೆ ಕೃತಜ್ಞತೆ ಹೇಳಲು ಬರಲಿಲ್ಲ. ಇಂಥವರು ಅಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಬಳ್ಳಾರಿ ಜನ ಸೂಕ್ತ ಕಾಲದಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ರಾಯಬರೇಲಿ ಉಳಿಸಿಕೊಂಡು ಬಳ್ಳಾರಿಯ ಜನತೆಗೆ ದ್ರೋಹ ಮಾಡಿದರು. ಜಿಲ್ಲೆಯ ಅಭಿವೃದ್ಧಿಗೆ 3 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು. ಆದರೆ ಅದಾವುದೂ ಕೂಡ ಅನುಷ್ಠಾನವಾಗಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ಸಮಾವೇಶ ನಡೆಸುತ್ತಾರೆ ಎಂದು ಕಿಡಿಕಾರಿದರು.

ಇಡೀ ದೇಶವಾಗಿ ಒಟ್ಟಾಗಿ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಭಾರತವೇ ಬಲಿಷ್ಠವಾಗಿ ದೇಶದ ಜಿಡಿಪಿ ದರವು ಸುಧಾರಿಸಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿಮ್ಮ ಭಾರತ್ ಜೋಡೊ ಯಾರಿಗೆ ಬೇಕು ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಕೀರ್ತಿ, ಘನತೆ ಹೆಚ್ಚಾಗುತ್ತಿದೆ. ಇಡೀ ವಿಶ್ವವೇ ನಮ್ಮ ದೇಶದ ಕಡೆ ತಿರುಗಿ ನೋಡುತ್ತಿದೆ. ಕಾಂಗ್ರೆಸ್ನವರು ಬಿಜೆಪಿ ವಿರುದ್ಧ ರಾಹುಲ್ ಎಂಬ ಮಿಸೇಲ್ ಬಿಟ್ಟರು. ಆದರೆ ಅದು ಗುರಿ ತಲುಪದೇ ವಿಫಲವಾಯಿತು ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಡೆಸುತ್ತಿರುವ ಜನ ಸಂಕಲ್ಪ ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸಹಕಾರ ಸಿಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಬಗ್ಗೆ ತೃಪ್ತಿ ಇದೆ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ನಿರೀಕ್ಷಿತ 150 ಸ್ಥಾನಗಳನ್ನು ಗೆಲ್ಲುವುದು ಶತಸಿದ್ದ. ಇದನ್ನು ಯಾವ ಶಕ್ತಿಗಳು ಕೂಡ ತಡೆಯಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ಗುಡುಗಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ನಾಲ್ಕು ಕಿ.ಮೀ ನಡೆದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಖಂಡಿತ ನಡೆದು ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ನನ್ನ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ನಾನು ಅವರ ಮಠಕ್ಕೆ ಇಳಿದು ಮಾತನಾಡಲಾರೆ. ಅದು ನನ್ನ ಸ್ವಭಾವವೂ ಅಲ್ಲ. ಅವರ ಆರೋಗ್ಯ ಚೆನ್ನಾಗಿರಲಿ. ಇನ್ನು ಹೆಚ್ಚು ಹೆಚ್ಚು ಜಿಮ್ ಮಾಡಲಿ. 100 ವರ್ಷ ಬಾಳಲಿ ಎಂದು ಹಾರೈಸುತ್ತೇನೆ ಎನ್ನುತ್ತಲೇ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

Articles You Might Like

Share This Article