ಹುಬ್ಬಳ್ಳಿ,ಸೆ.18- ಭಾರತ್ ಜೋಡೊ ಅಥವಾ ಕಾಂಗ್ರೆಸ್ ಜೋಡೊ ಮಾಡಿಕೊಂಡು ಕರ್ನಾಟಕದಲ್ಲಿ ಎಷ್ಟೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಎಲ್ಲ ನಾಟಕಗಳನ್ನು ರಾಜ್ಯದ ಜನತೆ ನೋಡಿ ಅವರನ್ನು ಎಲ್ಲಿ ಇಡಬೇಕೊ ಅಲ್ಲಿಟ್ಟಿದ್ದಾರೆ. ನೀವು ಯಾವುದೇ ಜೋಡೊ ಮಾಡಿ ಅಥವಾ ಇನ್ನೇನಾದರೂ ಮಾಡಿಕೊಳ್ಳಿ. ಅಧಿಕಾರಕ್ಕೆ ಬರುವ ಕನಸು ಕಾಣಬೇಡಿ ಎಂದು ಕಿಡಿಕಾರಿದರು.
ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ತೇಲಾಡುತ್ತಿದ್ದಾರೆ. ಈಗಾಗಲೇ ಕೆಲವರು ಖಾತೆಗಳನ್ನು ಹಂಚಿಕೊಂಡಿದ್ದಾರೆ. ಅವರ ಕನಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ. ಪ್ರತಿಪಕ್ಷದ ಸ್ಥಾನವೇ ಗಟ್ಟಿ ಎಂದರು.
ರಾಜ್ಯದ ಜನತೆ ಬುದ್ದಿವಂತರಿದ್ದಾರೆ. ಯಾರನ್ನು ಅಧಿಕಾರಕ್ಕೆ ತರಬೇಕೆಂಬ ಪ್ರಬುದ್ದತೆ ಮತದಾರರಿಗಿದೆ. ದೇಶದಲ್ಲಿ ಅಸ್ತಿತ್ವ ಕಳೆದುಕೊಂಡು ಅಡ್ರೆಸ್ಸೇ ಇಲ್ಲದಂತಾಗಿರುವ ಕಾಂಗ್ರೆಸ್ ಅಷ್ಟೊಇಷ್ಟೋ ಉಸಿರಾಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ.
2023ರ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಉಸಿರನ್ನು ನಿಲ್ಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತದಾರ ಇರುವಾಗ ಕಾಂಗ್ರೆಸ್‍ನ ನಾಟಕಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಬಿಎಸ್‍ವೈ ಹೇಳಿದರು.
ಇದೇ 22ರಿಂದ ನಾನು ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಪ್ರಮುಖರೆಲ್ಲರೂ ಪ್ರವಾಸ ನಡೆಸಲು ಸಿದ್ದರಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.