ಭಾರತ್ ಐಕ್ಯತಾ ಯಾತ್ರೆಗೆ ಕೇರಳದಲ್ಲಿ ಯಶಸ್ಸು

Social Share

ನವದೆಹಲಿ, ಸೆ.29- ಭಾರತ್ ಐಕ್ಯತಾ ಯಾತ್ರೆ ಕೇರಳದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಕೇರಳ ನನ್ನ ಮನೆ, ನನಗೆ ಮನೆಯಿಂದ ತುಂಬು ಪ್ರೀತಿ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ಎಷ್ಟು ಪ್ರೀತಿ ಕೊಟ್ಟೆ ಎಂಬುದು ಮುಖ್ಯವಲ್ಲ. ಆದರೆ ಏನೇ ಕೊಟ್ಟರು ಅದಕ್ಕಿಂತಲೂ ಹೆಚ್ಚಿನದನ್ನು ಕೇರಳದ ಜನ ನನಗೆ ಮರಳಿ ನೀಡಿದ್ದಾರೆ. ನಾನು ಸದಾ ಕಾಲ ಕೇರಳಕ್ಕೆ ಋಣಿಯಾಗಿದ್ದೇನೆ ಎಂದು ಧನ್ಯವಾದ ಹೇಳಿದ್ದಾರೆ.

ಕೇರಳದ 18 ದಿನಗಳ ಪಾದಯಾತ್ರೆಯಲ್ಲಿ ಜನ ಸಾಮಾನ್ಯರ ಸ್ಪಂದನೆ ಉತ್ತಮವಾಗಿತ್ತು. ಭದ್ರತೆಯ ಕೋಟೆಯನ್ನು ಭೇದಿಸಿ ಜನ ಸಾಮಾನ್ಯರನ್ನು ಅಪ್ಪಿಕೊಂಡಿದ್ದು, ಕೈ ಕುಲುಕಿದ್ದು ಕಂಡು ಬಂತು. ಹಾದಿ ನಡುವೆ ರಾಹುಲ್‍ಗಾಂಧಿ ಬಾಲಕರೊಂದಿಗೆ ಫುಟ್‍ಬಾಲ್ ಆಟವಾಡಿದರು. ಹಾಯಿ ದೋಣಿ ಸ್ಪರ್ಧೆಯಲ್ಲಿ ಭಾಗಿಯಾದರು.

ಹಲವಾರು ಮಕ್ಕಳನ್ನು ಎತ್ತಿ ಮುದ್ದಾಡಿದರು. ಯುವ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿದರು. ಹಲವು ಚಲನಚಿತ್ರ ನಟರು ಪಾದಯಾತ್ರೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. ಹಲವು ವಿಶೇಷಗಳಿಗೆ ಕಾರಣವಾಗಿದ್ದ ಯಾತ್ರೆ ಇಂದು ಕೇರಳದಿಂದ ನಿರ್ಗಮಿಸಲಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ.

ವಯನಾಡು ಕ್ಷೇತ್ರದ ಸಂಸದರು ಆಗಿರುವ ರಾಹುಲ್‍ಗಾಂಧಿ ಭಾರತ ಐಕ್ಯತಾ ಯಾತ್ರೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮತ್ತು ಯುಡಿಎಫ್‍ನ ನಾಯಕರು, ಕಾರ್ಯಕರ್ತರು, ಕೇರಳದ ಮಾಧ್ಯಮ, ಪೊಲೀಸರು ಮತ್ತು ವೈಯಕ್ತಿಕವಾಗಿ ಎಲ್ಲರಿಗೂ ತುಂಬು ಹೃದಯದ ಕೃಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಕೇರಳದ ಕಲೆ ಸಂಸ್ಕøತಿಗಳ ದೃಶ್ಯವೈಭವ ಇರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಎಲ್ಲಾ ರಾಜ್ಯಗಳ ಕಾಂಗ್ರೆಸ್ ಘಟಕಗಳು ಕಡ್ಡಾಯವಾಗಿ ಕೇರಳದಿಂದ ಸಂಘಟನೆ ಕೆಲಸವನ್ನು ಕಲಿಯಬೇಕು ಎಂದಿರುವ ಅವರು ಬೃಹತ್ ಯಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ ಕೇರಳದ ಕಾಂಗ್ರೆಸ್‍ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Articles You Might Like

Share This Article