ಜನರಿಗೆ ನಾನಾರೀತಿಯ ಸಮಸ್ಯೆ, ಆಡಳಿತಾ ರೂಢ ಬಿಜೆಪಿಗೆ ಅಧಿಕಾರದ್ದೇ ಚಿಂತೆ :ಕಾಂಗ್ರೆಸ್ ಕಿಡಿ

Spread the love

ಬೆಂಗಳೂರು, ಜೂ.6- ರಾಜ್ಯದ ಜನರನ್ನು ನಾನಾರೀತಿಯ ಸಮಸ್ಯೆಗಳು ಕಾಡುತ್ತಿವೆ, ಆದರೆ ಆಡಳಿತಾ ರೂಢ ಬಿಜೆಪಿಗೆ ಒಂದೇ ಚಿಂತೆ ಅದು ಅಧಿಕಾರದ ಚಿಂತೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಕರೋನಾ ಸಂಕಟದ ನಡುವೆ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಅಂಪೊಟರಿಸನ್- ಬಿ ಔಷಧದ ಪೂರೈಕೆಯಾಗದೆ ಕೊರತೆ ಇದೆ. ಲಾಕ್ಡೌನ್ನಿಂದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ, ಆರ್ಥಿಕ ನೆರವು ನೀಡುವಲ್ಲಿ ಸರ್ಕಾರ ಸೋತಿದೆ, ಇದೆಲ್ಲದರ ನಡುವೆ ಅಜ್ಜಿಗೆ ಅರಿವೆ ಚಿಂತೆಯಾದರೆ, ಬಿಜೆಪಿಗೆ ‘ಇರುವ’ ಚಿಂತೆ ಎಂದು ಟ್ವಿಟರ್ ನಲ್ಲಿ ಟೀಕಿಸಿದೆ.

ಜನರ ಸಮಸ್ಯೆಗಳು ನೂರಾರಿವೆ, ಕರೋನಾ, ಆರ್ಥಿಕ ಕುಸಿತ, ನಿರುದ್ಯೋಗ, ಆರ್ಥಿಕ ನೆರವು ಸಿಗದಿರುವುದು, ಲಸಿಕೆಗಳ ಅಭಾವ, ಬ್ಲಾಕ್ ಫಂಗಸ್ ಚಿಕಿತ್ಸೆಗೆ ಅಂಪೊಟರಿಸನ್ ಕೊರತೆ, ಕೇಂದ್ರದ ಸರ್ಕಾರದ ಅಸಹಕಾರ, ಬೆಲೆ ಏರಿಕೆ, ಕೊಳೆಯುತ್ತಿರುವ ರೈತರ ಬೆಳೆಗಳು, ಏರುತ್ತಿರುವ ಪೆಟ್ರೋಲ್, ಡಿಸೇಲ್ ಬೆಲೆಗಳು, ಕುಸಿದ ಆರೋಗ್ಯ ಕ್ಷೇತ್ರ ಹೀಗೆ ಹಲವಾರು ಸಮಸ್ಯೆಗಳು ಜನರನ್ನು ಕಾಡಿಸುತ್ತಿವೆ. ಆದರೆ ಬಿಜೆಪಿಗೆ ಏಕೈಕ ಸಮಸ್ಯೆಯಿದೆ, ಅದು ನಾಯಕತ್ವ ಬದಲಾವಣೆಯ ಚಿಂತೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆಪರೇಷನ್ ಕಮಲಧಿಂದ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ನಿರಂತರ ಅನಾರೋಗ್ಯ ಕಾಡುತ್ತಿದೆ, ಮೊದಲ ಬಾರಿ ನೆರೆ ಬಂದಾಗ ರಾಜ್ಯದಲ್ಲಿ ಸಂಪುಟವೇ ಇರಲಿಲ್ಲ, ಎರಡನೇ ನೆರೆ ಬಂದಾಗ, ಖಾತೆಯ ಕಿತ್ತಾಟ ನಡೆಯುತ್ತಿತ್ತು. ಕರೋನಾ ಒಂದನೇ ಅಲೆಯಲ್ಲಿ ಸಚಿವರ ನಡುವೆ ಕಿತ್ತಾಟ ನಡೆಯುತ್ತಿತ್ತು. ಕರೋನಾ ಎರಡನೇ ಅಲೆ ಇರುವಾಗ ಸಿಎಂ ಕುರ್ಚಿ ರಂಪಾಟ ಸುರುವಾಗಿದೆ.

ಬಿಜೆಪಿ ಆಡಳಿತವೆಂದರೆ ರಾಜ್ಯಕ್ಕೆ ಶಾಪವಿದ್ದಂತೆ, ಬಿಜೆಪಿಯ ಜಟಾಪಟಿಯಲ್ಲಿ ಜನರ ಕಷ್ಟ ಕೇಳುವವರಿಲ್ಲದಾಗಿದೆ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

Facebook Comments