ಕೈ-ಕಮಲ-ಜೆಡಿಎಸ್‍ನಿಂದ ಚುನಾವಣೆಗೆ ತಾಲೀಮು ಶುರು

Social Share

ಬೆಂಗಳೂರು,ಆ.24- ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಎಂಟು ತಿಂಗಳಷ್ಟೇ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಚುನಾವಣೆಗೆ ಈಗಾಗಲೇ ತಾಲೀಮು ಶುರುಮಾಡಿಕೊಂಡಿವೆ. ಮತದಾರರ ಓಲೈಕೆಗೆ ಅಭಿವೃದ್ಧಿ ವಿಚಾರಗಳಿ ಗಿಂತ ಧರ್ಮ, ಆಹಾರ, ಉಡುಗೆ, ತೊಡಿಗೆ ಜನರ ಧಾರ್ಮಿಕ ಭಾವನೆಗಳು ಸೇರಿದಂತೆ ಮತೀಯ ವಿಷಯಗಳೇ ಮುನ್ನಲೆಗೆ ಬಂದಿವೆ.

ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ, ಪಿಎಸ್‍ಐ ಹಗರಣ, ಪ್ರವಾಹ ಪರಿಹಾರ, ಬೆಲೆ ಏರಿಕೆ, ಅಭಿವೃದ್ದಿ ಹಿನ್ನಡೆ ಮುಂತಾದ ವಿಚಾರ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡಲು ಸಿದ್ದತೆ ಮಾಡಿ ಕೊಳ್ಳುತ್ತಿದ್ದರೆ, ಇದಕ್ಕೆ ಪ್ರತ್ಯಸ್ತ್ರವಾಗಿ ಸಾವರ್ಕರ್ ಹಾಗೂ ಹಿಂದುತ್ವದ ಮೂಲಕ ಕೌಂಟರ್ ನೀಡಲು ಬಿಜೆಪಿ ತಂತ್ರ ಹೂಡುತ್ತಿದೆ.

ಈಗಾಗಲೇ ಸರಣಿ ಸಭೆಗಳ ಮೂಲಕ ಬಿಜೆಪಿ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿ ಕೊಂಡಿದೆ. ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಭ್ರಷ್ಟಾಚಾರದ ಆರೋಪ ದೊಡ್ಡ ಮಟ್ಟಿನಲ್ಲಿ ಹೊಡೆತ ಬಿದ್ದಿತ್ತು. ಚುನಾವಣಾ ಸಂದರ್ಭದಲ್ಲೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ.

ಈ ನಡುವೆ, ಶುರುವಾದ ಸಾವರ್ಕರ್ ಗದ್ದಲ ಬಿಜೆಪಿ ಪಾಲಿಗೆ ಕಾಂಗ್ರೆಸ್ ಮಣಿಸಲು ಸಿಕ್ಕಿರುವ ಉತ್ತಮವಾದ ಅಸ್ತ್ರವಾಗಿದೆ. ಇದರ ಜೊತೆಗೆ ಕೊಡಗಿನಲ್ಲಿ ನಡೆದ ಮೊಟ್ಟೆ ಎಸೆತ ಘಟನೆಯ ಬಳಿಕ ಮಾಂಸಹಾರ, ಸಸ್ಯಹಾರ ವಿವಾದವೂ ಶುರುವಾಗಿದೆ.
ಸಿದ್ದರಾಮಯ್ಯ ಅವರು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರವನ್ನು ಬಿಜೆಪಿ ಮುನ್ನಲೆಗೆ ತರುತ್ತಿದೆ. ಈ ಹಿಂದೆ ಮೀನು ತಿಂದು ದೇವಸ್ಥಾನಕ್ಕೆ ಹೋಗಿರುವ ವಿಚಾರವನ್ನು ಕೂಡಾ ಬಿಜೆಪಿ ಚರ್ಚೆಗೆ ತರುತ್ತಿದೆ.

ಈಗಾಗಲೇ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಇತರ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಸಿಎಂ ರಾಜಕೀಯ ಕಾರ್ಯ ದರ್ಶಿ ಎಂಪಿ ರೇಣುಕಾಚಾರ್ಯ ಅವರು ತಮ್ಮ ಮನೆಯ ಮುಂದೆ ಸಾವರ್ಕರ್ ಫ್ಲೆಕ್ಸ್ ಹಾಕಿದ್ದಾರೆ.

ಇದರ ಜೊತೆಗೆ ತಾಕತ್ತಿದ್ದರೆ ಟಿಪ್ಪು ಫೋಟೋ ವನ್ನು ನಿಮ್ಮ ಮನೆ ಕಚೇರಿ ಮುಂದೆ ಹಾಕಿ ಎಂದು ಬಿಜೆಪಿ ನಾಯಕರಿಗೂ ಸವಾಲು ಹಾಕಿದ್ದಾರೆ. ಈ ಮೂಲಕ ಸಾವರ್ಕರ್ ಟಿಪ್ಪು ವಿಚಾರಗಳೇ ರಾಜಕೀಯ ಚರ್ಚೆಯ ಸುದ್ದಿ ಕೇಂದ್ರವಾಗಿದೆ.

ಇನ್ನು ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಲು ಕಾಂಗ್ರೆಸ್ ಕೂಡಾ ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ತಂತ್ರಕ್ಕೆ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ. ಸಾವರ್ಕರ್, ಟಿಪ್ಪು, ಮಾಂಸಹಾರ ಚರ್ಚೆಗೆ ಅವಕಾಶ ನೀಡದೆ ಅಭಿವೃದ್ದಿ, ಭ್ರಷ್ಟಾಚಾರ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸಬೇಕು ಎಂಬುವುದು ಕಾಂಗ್ರೆಸ್ ಯೋಜನೆಯಾಗಿದೆ.

ಅದರ ಜೊತೆಗೆ ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ತಂತ್ರ ಹೂಡುತ್ತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತಷ್ಟು ಭಾವನಾತ್ಮಕ ವಿಚಾರಗಳು ಮುನ್ನಲೆಗೆ ಬರುವುದರಲ್ಲಿ ಅಚ್ಚರಿಯಿಲ್ಲ.

ಜನರ ಗೋಳು ಕೇಳುವವರು ಯಾರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆ, ಪ್ರವಾಹದಿಂದಾಗಿ ಆದ ಅನಾಹುತಗಳಲ್ಲಿ 73 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 14 ಜಿಲ್ಲೆಗಳು,161 ಗ್ರಾಮಗಳು ಅತಿವೃಷ್ಟಿ ಪರಿಣಾಮದಿಂದ ಸಮಸ್ಯೆಯನ್ನು ಅನುಭವಿಸುತ್ತಿದೆ. ಅತಿವೃಷ್ಟಿಗೆ 21,727 ಜನರು ಸಿಲುಕಿದ್ದು ಸುಮಾರು 7,386 ಜನರು ಸಂತ್ರಸ್ತರಾಗಿ ಆಶ್ರಯ ಕೇಂದ್ರಗಳಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅತಿವೃಷ್ಟಿಯಿಂದ ರಾಜ್ಯದಲ್ಲಿ 18 ಸಾವಿರದ 280 ಹೆಕ್ಟೇರ್ ಕೃಷಿ ಬೆಳೆ, 4565 ಹೆಕ್ಟೇರ್ ತೋಟಗಾರಿಕೆ ಬೆಳೆ, 1392 ಕಿಮಿ ರಸ್ತೆ, 899 ಕಿರು ಸೇತುವೆ, 4324 ಶಾಲೆಗಳು, 55 ಆರೋಗ್ಯ ಕೇಂದ್ರ, 2146 ಅಂಗನವಾಡಿ, 16 ಸಾವಿರದ 510 ವಿದ್ಯುತ್ ಕಂಬ, 1880 ಟ್ರಾನ್ಸ್ ಪಾರ್ಮರ್ ಗಳು 61 ಕೆರೆಗಳು ಹಾನಿಗೊಳಗಾಗಿವೆ. ಕೆಲವು ಕಡೆಗಳಲ್ಲಿ ಪÀರಿಹಾರ ನೀಡಿದರೂ ಇನ್ನು ಪೂರ್ಣ ಪ್ರಮಾಣದಲ್ಲಿ ಹಾನಿ ಸರಿಪಡಿಸುವ ಕೆಲಸಗಳು ನಡೆಯುತ್ತಿಲ್ಲ.

ಆದರೆ ಇವೆಲ್ಲವನ್ನು ತೆರೆಗೆ ಸರಿಸುವ ಪ್ರಯತ್ನಗಳನ್ನು ಆಡಳಿತ ಪಕ್ಷ ನಡೆಸುತ್ತಿದೆ. ಇನ್ನು ವಿರೋಧ ಪಕ್ಷಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುವ ಬದಲಾಗಿ ವಿರೋಧ ಪಕ್ಷಗಳ ಮುಖಂಡರೂ ಭಾವನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಾಗೂ ಅದೇ ವಿಚಾರವನ್ನು ಚರ್ಚೆಯಲ್ಲಿಡುವ ಪ್ರಯತ್ನ ನಡೆಸುತ್ತಿದ್ದಾರೆ.

Articles You Might Like

Share This Article